ಬೆಂಗಳೂರು: ಧರ್ಮಸ್ಥಳದ ಗೌರವ ಮತ್ತು ರಕ್ಷಣೆ ವಿಷಯದಲ್ಲಿ ಯಾವುದೇ ರಾಜಕೀಯ ಲೇಪನವಿಲ್ಲದೆ ಕಾಂಗ್ರೆಸ್ ಸರ್ಕಾರ ಸದಾ ಬೆಂಬಲವಾಗಿ ನಿಂತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗುರುವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ, ಧರ್ಮಸ್ಥಳಕ್ಕೆ ದುರುದ್ದೇಶಪೂರ್ವಕವಾಗಿ ಕಳಂಕ ತರುವ ಪ್ರಯತ್ನಗಳ ಬಗ್ಗೆ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳಕ್ಕೆ ಕಳಂಕ ತರುವ ಹುನ್ನಾರ?
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಧರ್ಮಸ್ಥಳದ ಗೌರವಕ್ಕೆ ಕಳಂಕ ತರುವ ಉದ್ದೇಶದಿಂದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು. “ಈ ಪ್ರಕರಣವು ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿತ್ತು. ಆದರೆ, ಬಿಜೆಪಿಯವರು ಕಾಂಗ್ರೆಸ್‌ನ ಮೇಲೆ ಹಿಂದೂ ವಿರೋಧಿ ಎಂಬ ಗೂಬೆ ಕುರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ರಾಜಕೀಯ ಲೇಪನ ಮಾಡಿಲ್ಲ” ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. SIT ತನಿಖೆಯ ರಿಪೋರ್ಟ್ ಬಂದಾಗ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
SITಯು ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದೆ. ಈ ದೂರಿನಲ್ಲಿ “ನೂರಾರು ಶವಗಳಿವೆ” ಎಂಬ ಆರೋಪವನ್ನು ಮಾಡಲಾಗಿತ್ತು. ಈ ಆಧಾರದ ಮೇಲೆ ಉತ್ಖನನ ನಡೆಸಿ, ಕೆಲವು ವಸ್ತುಗಳನ್ನು FSL (ಫಾರೆನ್ಸಿಕ್ ಸೈನ್ಸ್ ಲ್ಯಾಬ್)ಗೆ ಕಳುಹಿಸಲಾಗಿದೆ. “ಈ ಆರೋಪಗಳು ಪೂರ್ವನಿಯೋಜಿತವಾಗಿವೆಯೇ ಎಂಬುದರ ಬಗ್ಗೆಯೂ SIT ತನಿಖೆ ನಡೆಸುತ್ತಿದೆ. ಬಿಜೆಪಿಯವರು ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.
“ಹಿಂದೂ ಆಗಲು ಬಿಜೆಪಿ ಮೆಂಬರ್‌ಶಿಪ್ ಬೇಕಿಲ್ಲ”
ಬಿಜೆಪಿಯವರು ಕಾಂಗ್ರೆಸ್‌ನವರನ್ನು ಹಿಂದೂ ವಿರೋಧಿಗಳೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು. “ಹಿಂದೂ ಆಗಲು ಬಿಜೆಪಿ ಮೆಂಬರ್‌ಶಿಪ್ ತೆಗೆದುಕೊಳ್ಳಬೇಕಿಲ್ಲ. ಕಾಂಗ್ರೆಸ್‌ನಲ್ಲಿ ನಾವೆಲ್ಲರೂ ಹಿಂದೂಗಳೇ. ನಮ್ಮ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಅಪ್ಪಟ ಹಿಂದೂ” ಎಂದು ಅವರು ತಿಳಿಸಿದರು. ಧರ್ಮಸ್ಥಳದ ರಕ್ಷಣೆಯ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಾವಾಗಲೂ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.
ಬಾನು ಮುಷ್ತಾಕ್‌ಗೆ ಬಿಜೆಪಿ ವಿರೋಧ ಏಕೆ?
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿದರು. “ಬಾನು ಮುಷ್ತಾಕ್ ರಾಜ್ಯದ ಮಹಿಳೆಯಾಗಿದ್ದು, ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಹಿಂದೆ ನಿಸಾರ್ ಅಹ್ಮದ್ ಅವರನ್ನು ಒಪ್ಪಿಕೊಂಡವರು ಇಂದು ಬಾನು ಮುಷ್ತಾಕ್‌ಗೆ ಏಕೆ ವಿರೋಧ ಮಾಡುತ್ತಿದ್ದಾರೆ? ಇದು ಬಿಜೆಪಿಯ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.