ಧರ್ಮಸ್ಥಳದಲ್ಲಿ ಕಳೆದ 20 ವರ್ಷಗಳಿಂದ ಸಂಭವಿಸಿರುವ ಅಸಹಜ ಸಾವುಗಳು, ಅತ್ಯಾಚಾರ ಪ್ರಕರಣಗಳು ಮತ್ತು ನಾಪತ್ತೆಯಾದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಪ್ರಕರಣಗಳು ರಾಜ್ಯದಾದ್ಯಂತ ಗಂಭೀರ ಚರ್ಚೆಗೆ ಕಾರಣವಾಗಿವೆ. ಈ ಸಂಬಂಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ (SP) ಪ್ರಕರಣದ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಕ್ರಮವು ಧರ್ಮಸ್ಥಳದ ನಿಗೂಢ ಸಾವುಗಳ ಸತ್ಯವನ್ನು ಬಹಿರಂಗಪಡಿಸಲು ಸರ್ಕಾರದ ಪರೋಕ್ಷ ಒತ್ತಡವನ್ನು ಸೂಚಿಸುತ್ತದೆ.
ಪತ್ರದ ವಿವರಗಳು
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನ ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳು ಕೂಡ ಮನುಷ್ಯರೊಬ್ಬರ ತಲೆಬುರುಡೆ ದೊರಕಿದ ಬಗ್ಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆಯ ವರದಿ ಪ್ರಸಾರ ಮಾಡಿದೆ.
ಇದನ್ನ ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಕಳೆದ 20ಕ್ಕೂ ಹೆಚ್ಚು ವರ್ಷ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕವಾದ ಸಾವು ಮತ್ತು ನಾಪತ್ತೆ ಪ್ರಕರಣಗಳು ನಡೆದಿರುವ ಬಗ್ಗೆ ವ್ಯಕ್ತಿ ಹೇಳಿದ್ದಾರೆ. ಅನೇಕ ಕುಟುಂಬಗಳು ತಮ್ಮ ಮಕ್ಕಳ ನಾಪತ್ತೆ, ಸಾವಿನ ಪ್ರಕರಣ ದಾಖಲಿಸಲು ಪೊಲಿಸ್ ಠಾಣೆಗೆ ಹೋದಾಗ ಸಿಬ್ಬಂದಿಗಳು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಕೂಡ ಆರೋಪ ಮಾಡಿರುತ್ತಾರೆ.
ಹಾಗಾಗಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು/ಕೊಲೆ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ.