ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿದ್ದ ಅನಾಮಿಕ ದೂರುದಾರ, ‘ಭೀಮ’ ಎಂದು ಕರೆಯಲ್ಪಟ್ಟ ಮಾಸ್ಕ್‌ಮ್ಯಾನ್‌ನ ನಿಜವಾದ ಹೆಸರು ಕೊನೆಗೂ ಬಹಿರಂಗವಾಗಿದೆ.
ವಿಶೇಷ ತನಿಖಾ ದಳ (SIT) ಅಧಿಕಾರಿಗಳು ಆತನನ್ನು ಸಿ.ಎನ್. ಚಿನ್ನಯ್ಯ ಎಂದು ಗುರುತಿಸಿದ್ದಾರೆ. ಇಂದು (ಶನಿವಾರ) SIT ತಂಡವು ಚಿನ್ನಯ್ಯನನ್ನು ಬಂಧಿಸಿದ್ದು, ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದೆ.
1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ ಚಿನ್ನಯ್ಯ, ಲೈಂಗಿಕ ದೌರ್ಜನ್ಯ ಮತ್ತು ಕೊಲೆಗೊಳಗಾದ ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದೇನೆ ಎಂದು ದೂರು ನೀಡಿದ್ದ. ಆತ ಗುರುತಿಸಿದ 17 ಸ್ಥಳಗಳಲ್ಲಿ ತನಿಖೆ ನಡೆಸಿದ SIT, ಕೇವಲ ಎರಡು ಜಾಗಗಳಲ್ಲಿ ಮಾತ್ರ ಮೂಳೆಗಳನ್ನು ಪತ್ತೆ ಮಾಡಿತ್ತು.
ಆದರೆ, ಚಿನ್ನಯ್ಯನ ಹೇಳಿಕೆಗಳ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಬಂದಾಗ, SIT ಮುಖ್ಯಸ್ಥ ಡಿಐಜಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಲಾಯಿತು. ಈ ವಿಚಾರಣೆಯಲ್ಲಿ ಚಿನ್ನಯ್ಯನ ದೂರು ಸುಳ್ಳು ಎಂದು ಸಾಬೀತಾಯಿತು, ಮತ್ತು ಆತನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯ ರಕ್ಷಣೆಯನ್ನು ರದ್ದುಗೊಳಿಸಲಾಯಿತು.
ಶುಕ್ರವಾರ ಬೆಳಗ್ಗೆ 10:30ರಿಂದ ರಾತ್ರಿಯವರೆಗೆ ನಡೆದ ವಿಚಾರಣೆಯಲ್ಲಿ, ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಹಲವು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿರುವ ಸಾಧ್ಯತೆ ಇದೆ. ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಆಡಳಿತದೊಂದಿಗೆ ಸಂಬಂಧವಿರುವ ಕೆಲವು ಪ್ರಭಾವಿ ವ್ಯಕ್ತಿಗಳಿಂದ ಶವಗಳನ್ನು ಹೂತಿಡಲು ಒತ್ತಡ ಹೇರಲಾಗಿತ್ತು ಎಂದು ಆತ ಆರೋಪಿಸಿದ್ದ. ಆದರೆ, ಈ ಆರೋಪಗಳು ದುರುದ್ದೇಶಪೂರಿತ ಎಂದು SIT ಕಂಡುಕೊಂಡಿದೆ. ಚಿನ್ನಯ್ಯನ ಬಂಧನವು ಈ ಪ್ರಕರಣದಲ್ಲಿ ಇನ್ನಷ್ಟು ಜನರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.