ದಾವಣಗೆರೆ: ಕಳ್ಳತನ ಮಾಡುವವರಿಗೆ, ದೇವರಾದೇನು? ದೇವಸ್ಥಾನವಾದರೇನು? ಕದಿಯುವುದೇ ಅವರ ಕೆಲಸ. ಗಣೇಶೋತ್ಸವದ ಸಂಭ್ರಮದ ನಡುವೆ, ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ಪ್ರತಿಷ್ಠಾಪನೆ ಮಾಡಿದ್ದ ಗಣಪನ ಮೂರ್ತಿಯನ್ನು ಕಳ್ಳತನ ಮಾಡಿದ್ದಾರೆ.
ಜಗಳೂರು ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಅದ್ಧೂರಿ ಪೂಜೆ ನಡೆಸಿ, ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಆಗಸ್ಟ್ 28ರ ರಾತ್ರಿ ಗ್ರಾಮಸ್ಥರು ಮೂರ್ತಿಗೆ ಪೂಜೆ ಸಲ್ಲಿಸಿ, ತಮ್ಮ ಮನೆಗಳಿಗೆ ತೆರಳಿದ್ದರು. ಆದರೆ, ರಾತ್ರಿಯಿಂದ ಬೆಳಗಿನವರೆಗಿನ ಕೆಲವೇ ಗಂಟೆಗಳಲ್ಲಿ ಕಳ್ಳರು ಗಣೇಶ ಮೂರ್ತಿಯನ್ನು ಕದ್ದೊಯ್ದಿದ್ದಾರೆ. ಬೆಳಿಗ್ಗೆ ಪೂಜೆಗಾಗಿ ಆಗಮಿಸಿದ ಗ್ರಾಮಸ್ಥರಿಗೆ ಮೂರ್ತಿ ಕಾಣೆಯಾಗಿರುವುದು ತಿಳಿದು ಆಘಾತ ತಂದಿದೆ.
ಗ್ರಾಮಸ್ಥರು ತಕ್ಷಣ ಜಗಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ. ಆದರೆ, ಕಳ್ಳರ ಬಗ್ಗೆ ಯಾವುದೇ ಸುಳಿವು ಇನ್ನೂ ಲಭ್ಯವಾಗಿಲ್ಲ ಎಂದು ಜಗಳೂರು ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.