ದಾಂಡೇಲಿ-ಅಂಬಿಕಾನಗರ ರಸ್ತೆಯ ಮೋಹಿನಿ ವೃತ್ತದ ಬಳಿ ಬುಧವಾರ ಸಂಜೆ ಸುಮಾರು 4:30ರ ಸಮಯದಲ್ಲಿ ಭೀಕರ ಬೈಕ್ ಅಪಘಾತ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾದವರು ಕಲಘಟಗಿ ನಿವಾಸಿ ಪರಶುರಾಮ್ ಹಾಗೂ ಧಾರವಾಡ ಮೂಲದ ಮೇಘಾ. ಇಬ್ಬರೂ ಅಂಬಿಕಾನಗರದಿಂದ ದಾಂಡೇಲಿ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಈ ದುರಂತ ನಡೆದಿದೆ.
ಘಟನೆಯನ್ನು ಕಂಡ ಸ್ಥಳೀಯರು ತಕ್ಷಣ ಧಾವಿಸಿ ಬಂದು ಗಾಯಾಳುಗಳನ್ನು ರಕ್ಷಿಸಿದರು. ಅಂಬಿಕಾನಗರ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ನಾಯ್ಕ ಅವರು ತಮ್ಮ ವಾಹನದಲ್ಲಿ ಗಾಯಾಳುಗಳನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಆಪತ್ತಿನ ಸ್ಥಿತಿಯಿಂದ ಹೊರಬಂದಿಲ್ಲ ಎನ್ನಲಾಗಿದೆ.
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅತಿ ವೇಗ, ರಸ್ತೆಯಲ್ಲಿ ಇದ್ದ ಜಲ್ಲಿ ಅಥವಾ ತಾಂತ್ರಿಕ ದೋಷ ಎಂಬ ಅನುಮಾನ ವ್ಯಕ್ತವಾಗಿದೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಯಾದಗಿರಿಯಲ್ಲಿ ಭೀಕರ ರಸ್ತೆ ಅಪಘಾತ: ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು
ಯಾದಗಿರಿ ನಗರದ ವಾಲ್ಮೀಕಿ ವೃತ್ತದಲ್ಲಿ ರಾತ್ರಿ ಲಾರಿ ಚಾಲಕನ ಭಯಾನಕ ನಿರ್ಲಕ್ಷ್ಯದಿಂದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಸವಾರನ ಮೇಲೆಯೇ ಲಾರಿ ಹಾಯ್ದು ಹೋಗಿದ್ದು, ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತ ದುರ್ದೈವಿ ಕನಕನಗರ ನಿವಾಸಿ ಈಶೆಪ್ಪ (ವಯಸ್ಸು 42). ರಾತ್ರಿ ಸಮಯದಲ್ಲಿ ಲಾರಿ ಚಾಲಕ ಬೈಕ್ ಸವಾರನ ಮೇಲೆಯೇ ಲಾರಿಯನ್ನು ಹಾಯ್ದಿದ್ದು, ಬೈಕ್ ಸವಾರ ಲಾರಿಯ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ನಂತರ ಲಾರಿ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಲಾರಿ ಚಾಲಕನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.





