ವರದಿ: ಮೂರ್ತಿ,ಬೀರಯ್ಯನಪಾಳ್ಯ. ಗ್ಯಾರಂಟಿ ನ್ಯೂಸ್, ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿ ಸೈಬರ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಗವಾನ್ ಆಧಿನಾಥ್ ಜೈನ್ ಆಸ್ಪತ್ರೆಯ ಹಿರಿಯ ನೇತ್ರ ತಂತ್ರಜ್ಞ ಸಿ.ಆರ್ ದಾಸಣ್ಣ ಎಂಬವರು ಈ ವಂಚನೆಗೆ ಬಲಿಯಾಗಿದ್ದಾರೆ.
ದಾಸಣ್ಣ ಅವರ ದೂರಿ ಪ್ರಕಾರ ತಮ್ಮ ಮನೆಯ ಬಾತ್‌ರೂಮ್‌ನ ಕಮೋಡ್ ಅನ್ನು ಸರಿಪಡಿಸಲು ಆನ್‌ಲೈನ್ ಮೂಲಕ ಪ್ಲಂಬರ್ ಸೇವಾ ತಜ್ಞನೊಬ್ಬನನ್ನು ಹುಡುಕಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ 7003975127 ಎಂಬ ಸೈಬರ್ ಕಳ್ಳ ತನ್ನ ಮೊಬೈಲ್ ನಂಬರ್‌ನಿಂದ ದಾಸಣ್ಣ ಅವರಿಗೆ ಮೆಸೇಜ್‌ವೊಂದು ಕಳಿಸಿದ್ದಾನೆ. ನಂತರ ಈ ನಂಬರ್‌ನಿಂದ ಅವರ ವಾಟ್ಸ್‌ಅ್ಯಪ್ ನಂಬರ್‌ಗೆ ಅಪರೂಪದ .apk ಫೈಲ್‌ವೊಂದನ್ನು ಕಳುಹಿಸಲಾಗಿದೆ.
ದಾಸಣ್ಣ ಅವರು ಆ ಫೈಲ್ ಓಪನ್ ಮಾಡಿದ ನಂತರ, ಅವರ ಮೊಬೈಲ್ ಫೋನ್‌ನಲ್ಲಿದ್ದ ಬ್ಯಾಂಕ್ ಲಿಂಕ್ ಖಾತೆಯಿಂದ ₹95,000 ಹಣವನ್ನು ವಂಚಕರು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಂಚನೆಯ ಅರಿವಾದ ತಕ್ಷಣ ದಾಸಣ್ಣ ಅವರು ಸೈಬರ್ ಅಪರಾಧ ನಿಯಂತ್ರಣ ನಂಬರ್ 1930 ಗೆ ಕರೆ ಮಾಡಿ ತಮ್ಮ ಖಾತೆ ಬ್ಲಾಕ್ ಮಾಡುವಂತೆ ಮನವಿ ಮಾಡಿದ್ದು, ಬಳಿಕ ತಮ್ಮ ಬ್ಯಾಂಕ್ ಶಾಖೆ — ಕೆನರಾ ಬ್ಯಾಂಕ್‌ಗೆ ಸಂಪರ್ಕಿಸಿ ವಿವರ ವಿವರಿಸಿದ್ದಾರೆ.
ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66(ಸಿ) ಮತ್ತು 66(ಡಿ)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ರೀತಿಯ ಸೈಬರ್ ಮೋಸದಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
| Reported by: ಮೂರ್ತಿ,ಬೀರಯ್ಯನಪಾಳ್ಯ , ಗ್ಯಾರಂಟಿ ನ್ಯೂಸ್ ನೆಲಮಂಗಲ