ಬೆಂಗಳೂರು: ಮಳೆಗಾಲದಲ್ಲಿ ಸರೀಸೃಪಗಳು ಮನೆಯೊಳಗೆ ನುಗ್ಗುವುದು ಸಾಮಾನ್ಯ. ಆದರೆ, ಇಂತಹ ಒಂದು ಘಟನೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ದುರಂತಕ್ಕೆ ಕಾರಣವಾಗಿದೆ. ಕ್ರಾಕ್ಸ್ ಚಪ್ಪಲಿಯೊಳಗೆ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿದ ಪರಿಣಾಮ 41 ವರ್ಷದ ಮಂಜು ಪ್ರಕಾಶ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.
ಮಂಜು ಪ್ರಕಾಶ್ ಅವರು ಇಂದು (ಆಗಸ್ಟ್ 30) ಬೆಳಗ್ಗೆ ಮನೆಯಿಂದ ಹೊರಗೆ ಹೋಗಲು ಸಿದ್ಧರಾಗುತ್ತಿದ್ದಾಗ, ಮನೆಯ ಅಂಗಳದಲ್ಲಿ ಇಟ್ಟಿದ್ದ ಕ್ರಾಕ್ಸ್ ಚಪ್ಪಲಿಯನ್ನು ಧರಿಸಿದ್ದಾರೆ. ಆದರೆ, ಚಪ್ಪಲಿಯೊಳಗೆ ಕೊಳಕು ಮಂಡಲ ಹಾವು ಒಳನುಗ್ಗಿ ಅಡಗಿತ್ತು. ಇದನ್ನು ಗಮನಿಸದ ಮಂಜು, ಚಪ್ಪಲಿಯನ್ನು ಧರಿಸಿ ಹೊರಗೆ ಹೋಗಿ, ಕೆಲವೇ ಕ್ಷಣಗಳಲ್ಲಿ ಮನೆಗೆ ವಾಪಸ್ ಬಂದು ಮಲಗಿದ್ದಾರೆ. ಈ ವೇಳೆ ಹಾವು ಕಚ್ಚಿದ್ದರಿಂದ ದೇಹದಲ್ಲಿ ವಿಷ ಹರಡಿ, ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.
ಮಂಜು ಪ್ರಕಾಶ್ ಅವರು ಕಳೆದ ಕೆಲವು ವರ್ಷಗಳ ಹಿಂದೆ ಅಪಘಾತದಿಂದ ಕಾಲಿನ ಸ್ಪರ್ಶಶಕ್ತಿಯನ್ನು ಕಳೆದುಕೊಂಡಿದ್ದರು. ಹಾವು ಕಚ್ಚಿದ್ದು ಆ ಕಾಲಿಗೆ ಆಗಿರುವುದರಿಂದ, ಅವರಿಗೆ ಯಾವುದೇ ನೋವು ಗೊತ್ತಾಗಿಲ್ಲ. ಇದರಿಂದ ವಿಷ ದೇಹದಾದ್ಯಂತ ಹರಡುವವರೆಗೂ ಯಾವುದೇ ಚಿಹ್ನೆ ಕಾಣಿಸಿರಲಿಲ್ಲ. ನೆರೆಮನೆಯವರು ಚಪ್ಪಲಿಯೊಳಗೆ ಸತ್ತಿರುವ ಹಾವನ್ನು ಗಮನಿಸಿ, ಮನೆಯವರಿಗೆ ತಿಳಿಸಿದ್ದಾರೆ. ಆದರೆ, ಆಗಲೇ ಮಂಜು ಅವರು ಹಾಸಿಗೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ಕೊನೆಯುಸಿರೆಳೆದಿದ್ದರು.
ಮಳೆಗಾಲದಲ್ಲಿ ಹಾವು, ಜಿರಳೆ, ಹುಳು-ಹುಪ್ಪಟೆಗಳು ಬೆಚ್ಚನೆಯ ಸ್ಥಳಗಳಾದ ಚಪ್ಪಲಿ, ಶೂ, ಮನೆಯ ಮೂಲೆಗಳಲ್ಲಿ ಅಡಗಿಕೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಚಪ್ಪಲಿ ಅಥವಾ ಶೂ ಧರಿಸುವ ಮುನ್ನ ಸೂಕ್ಷ್ಮವಾಗಿ ಪರಿಶೀಲಿಸುವುದು ಅತ್ಯಗತ್ಯ.
ಘಟನೆಯ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ.