ಚಿತ್ರದುರ್ಗಕ್ಕೆ ಹರಿದು ಬಂದ ಭದ್ರೆ: 30 ವರ್ಷಗಳ ಹೋರಾಟಕ್ಕೆ ಸಿಕ್ಕ ಜಯ

Untitled design (53)

ಚಿತ್ರದುರ್ಗ ಸೆ. 09: ಚಿತ್ರದುರ್ಗ ಜಿಲ್ಲೆಯ ಜನರು ಹಾಗೂ ರೈತರು ದಶಕಗಳಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಸಾಕಾರಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗೆ ನೀರು ಹರಿಸಿ ಟ್ರಯಲ್ ರನ್ ನಡೆಸಲಾಗಿದ್ದು, ಭದ್ರಾ ಜಲಾಶಯದಿಂದ ಹರಿದ ನೀರು ಇದೀಗ ಚಿತ್ರದುರ್ಗ ಜಿಲ್ಲೆಯ ಗಡಿ ಪ್ರವೇಶಿಸಿದೆ. ಚಿತ್ರದುರ್ಗ ಜಿಲ್ಲೆಯ ಕಾಲುವೆಯಲ್ಲಿ ಭದ್ರಾ ನೀರು ಹರಿದು ಬರುತ್ತಿದ್ದಂತೆ ರೈತರು ಹಾಗೂ ಸಾರ್ವಜನಿಕರಲ್ಲಿ ಸಂಭ್ರಮ ಮನೆಮಾಡಿದೆ.

ಭದ್ರಾ ಜಲಾಶಯದಿಂದ ಸುಮಾರು 144 ಕಿಲೋಮೀಟರ್‌ ದೂರ ಹರಿದು ಬಂದ ನೀರು, ಇದೀಗ ಗೋನೂರು ಕೆರೆಗೆ ಬಂದು ಸೇರ್ಪಡೆಯಾಗಿದೆ. ಬಹುದಿನಗಳ ಕನಸಾಗಿದ್ದ ಭದ್ರಾ ನೀರು ಕಣ್ಣೆದುರೇ ಹರಿದು ಬರುತ್ತಿರುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗೋನೂರು ಕೆರೆಗೆ ಭದ್ರೆ ಬರುತ್ತಿದ್ದಂತೆ ಜನರು ಹರ್ಷೋದ್ಘಾರ ವ್ಯಕ್ತಪಡಿಸಿ ಸಂಭ್ರಮಿಸಿದರು.

ಭದ್ರಾ ನೀರನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ರೈತರು ಹಾಗೂ ಸಾರ್ವಜನಿಕರು ನೀರಿಗೆ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರೈತ ಸಂಘದ ನೇತೃತ್ವದಲ್ಲಿ ಭದ್ರಾ ಕಾಲುವೆಗೆ ಬಾಗೀನ ಅರ್ಪಣೆ ಕಾರ್ಯಕ್ರಮವೂ ನಡೆಯಿತು. ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಮಠಾಧೀಶರೂ ಭಾಗಿಯಾಗಿದ್ದರು. ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಬಸವ ಕುಮಾರ ಶ್ರೀ ಹಾಗೂ ಯಾದವಾನಂದ ಶ್ರೀಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭದ್ರಾ ನೀರಿಗೆ ಗೌರವ ಸಲ್ಲಿಸಿದರು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರು, ಹೋರಾಟಗಾರರು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಭದ್ರಾ ಮೇಲ್ದಂಡೆ ಯೋಜನೆಗಾಗಿ ಜಿಲ್ಲೆಯ ಜನರು ಸುಮಾರು 30 ವರ್ಷಗಳಿಂದ ನಡೆಸಿಕೊಂಡು ಬಂದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ ಎಂಬ ಸಂತಸ ರೈತರಲ್ಲಿ ವ್ಯಕ್ತವಾಗಿದೆ.

ಚಿತ್ರದುರ್ಗದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿರೀಕ್ಷೆ ಮೂಡಿಸಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಕಾಲುವೆಯಲ್ಲಿ ಹರಿದಿರುವುದು ಜಿಲ್ಲೆಯ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ನೀರು ಗೋನೂರು ಕೆರೆಗೆ ತಲುಪುತ್ತಿದ್ದಂತೆ ‘ಭದ್ರೆ ಬಂದಳು’ ಎಂಬ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆಯ ನೀರಿನಿಂದ ರೈತರ ಬದುಕು ಹಸನಾಗಲಿ ಎಂಬ ಆಶಯವನ್ನು ಜನರು ವ್ಯಕ್ತಪಡಿಸಿದ್ದಾರೆ.

Exit mobile version