ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ; 3 ನರ್ಸಿಂಗ್ ವಿದ್ಯಾರ್ಥಿಗಳು ಸಾ*ವು

Untitled design 2026 08 21T174234.118

ಚಿತ್ರದುರ್ಗ, ಆ 21: ಗೋವಾದಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಪ್ರವಾಸಿ ಬಸ್ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಪಲ್ಟಿಯಾಗಿ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ಚಿತ್ರದುರ್ಗ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ ನಡೆದಿದೆ.

ಗಾಯಾಳುಗಳನ್ನು ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಗೋವಾ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದ ವಿದ್ಯಾರ್ಥಿಗಳು

ಮೃತರು ಬೆಂಗಳೂರಿನ ಯುನಿವರ್ಸಲ್ ನರ್ಸಿಂಗ್ ಕಾಲೇಜಿನ ಮೂರನೇ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಆಗಸ್ಟ್ 16 ರಂದು ಗೋವಾ ಪ್ರವಾಸಕ್ಕೆ ತೆರಳಿದ್ದು, ಪ್ರವಾಸ ಮುಗಿಸಿಕೊಂಡು ಇಂದು ಶುಕ್ರವಾರ ಬೆಳಗಿನ ಜಾವ ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಬಸ್ಸಿನಲ್ಲಿ ಒಟ್ಟು 49 ವಿದ್ಯಾರ್ಥಿಗಳು, ಇಬ್ಬರು ಬೋಧಕ ಸಿಬ್ಬಂದಿ ಹಾಗೂ ಒಬ್ಬ ಬೋಧಕೇತರ ಸಿಬ್ಬಂದಿ ಸೇರಿದಂತೆ ಸುಮಾರು 52ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

“ಭಾರಿ ಸದ್ದು ಕೇಳಿ ಎಲ್ಲರೂ ಕಿರುಚಿದೆವು”

ಅಪಘಾತದಿಂದ ಪಾರಾದ ವಿದ್ಯಾರ್ಥಿನಿಯೊಬ್ಬರು ಘಟನೆ ನಡೆದ ಕ್ಷಣವನ್ನು ವಿವರಿಸಿದ್ದಾರೆ.

ರಾತ್ರಿ ಸುಮಾರು 10.30ರ ವೇಳೆಗೆ ಎಲ್ಲರೂ ಮಲಗಿದ್ದೆವು. ಇದ್ದಕ್ಕಿದ್ದಂತೆ ಭಾರಿ ಸದ್ದು ಕೇಳಿಸಿತು. ಬಸ್ ಪಲ್ಟಿಯಾದ ತಕ್ಷಣ ಎಲ್ಲರೂ ಕಿರುಚಲು ಆರಂಭಿಸಿದೆವು. ಬಳಿಕ ಸ್ಥಳೀಯರು ಬಂದು ಬಸ್‌ನ ಗಾಜು ಒಡೆದು ನಮ್ಮನ್ನು ಹೊರಗೆ ರಕ್ಷಿಸಿದರು” ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡ ಮತ್ತೊಬ್ಬ ವಿದ್ಯಾರ್ಥಿಯೂ ಎಲ್ಲರೂ ನಿದ್ರೆಯಲ್ಲಿದ್ದಾಗ ಏಕಾಏಕಿ ಬಸ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ಸ್ಥಳೀಯರ ಸಮಯಪ್ರಜ್ಞೆಯಿಂದ ರಕ್ಷಣೆ

ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬಸ್ಸಿನ ಕಿಟಕಿಗಳ ಗಾಜು ಒಡೆದು ಒಳಗೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದರು. ಬಳಿಕ ಪೊಲೀಸರು ಹಾಗೂ ಆಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಪ್ರಾಥಮಿಕ ಮಾಹಿತಿ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ ಎಂದು ಶಂಕಿಸಲಾಗಿದೆ. ಅಪಘಾತದ ನಿಖರ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version