ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ನಾಲ್ಕನೇ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂರು ವರ್ಷದ ಬಾಲಕ ಅರಹಾತ್ ಬೋರಾ ದುರಂತ ಸಾವನ್ನಪ್ಪಿದ್ದಾನೆ. ತಂದೆಯ ಜೊತೆ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಜೈನ್ ಕಾಲೋನಿ ನಿವಾಸಿಯಾದ ಯಶವಂತ್ ಬೋರಾ ತಮ್ಮ ಮಗ ಅರಹಾತ್‌ನೊಂದಿಗೆ ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದರು. ಈ ವೇಳೆ ಟಾಟಾ ಏಸ್ ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ಜಲ್ಲಿ ರಾಶಿಯ ಮೇಲೆ ಪಲ್ಟಿಯಾಗಿದೆ. ರಸ್ತೆಗೆ ಬಿದ್ದ ಮಗುವಿನ ಮೇಲೆ ಹಿಂದಿನಿಂದ ಬಂದ ಟಾಟಾ ಏಸ್ ವಾಹನ ಹರಿದಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಘಟನೆಯಿಂದ ಯಶವಂತ್ ಬೋರಾ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.
ಸ್ಥಳಕ್ಕೆ ಚಿತ್ರದುರ್ಗ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ಮತ್ತು ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಲು ತನಿಖೆ ಆರಂಭವಾಗಿದೆ. ಟಾಟಾ ಏಸ್ ಚಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.