ಚಿಕ್ಕಮಗಳೂರು: ಪೈಪ್‌ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಅಪ್ಪ-ಮಗ ಅರೆಸ್ಟ್

Untitled design (17)

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು, ಪೆಟ್ರೋನೆಟ್ ಕಂಪನಿಯ ಪೈಪ್‌ಲೈನ್‌ನಲ್ಲಿ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹಿರೇಶಿಗಿರ ಗ್ರಾಮದ ವಿಜಯ್ ಕುಮಾರ್ ಮತ್ತು ಹರ್ಷ ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಪೂರೈಸುವ ಪೈಪ್‌ಲೈನ್‌ನಿಂದ ಸುಮಾರು 2,000 ಲೀಟರ್ ಪೆಟ್ರೋಲ್‌ನ್ನು ಟಿಪ್ಪರ್ ಲಾರಿಯ ಟ್ಯಾಂಕರ್‌ಗೆ ತುಂಬಿಕೊಂಡಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪೆಟ್ರೋನೆಟ್ ಕಂಪನಿಯ ಮ್ಯಾನೇಜರ್‌ನ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಗುಂಪು 2011ರಲ್ಲೂ ಇದೇ ರೀತಿಯ ಕಳ್ಳತನಕ್ಕೆ ಒಳಗಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಆರೋಪಿಗಳಿಂದ ಪೆಟ್ರೋಲ್ ತುಂಬಿದ ಟ್ಯಾಂಕರ್, ಕಳ್ಳತನಕ್ಕೆ ಬಳಸಿದ ಉಪಕರಣಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ಪೆಟ್ರೋನೆಟ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯದಲ್ಲಿ ಇತರರ ಭಾಗಿತ್ವವಿದೆಯೇ ಎಂಬುದನ್ನು ತಿಳಿಯಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version