ಮಡಿಕೇರಿಯ ತಡಿಯಂಡಮೋಳ್ ಪರ್ವತದಲ್ಲಿ ನಾಪತ್ತೆಯಾದ ಕೇರಳದ ಯುವತಿ ಶರಣ್ಯ ಪ್ರಕರಣ ಸುಖಾಂತ್ಯ ಕಂಡಿದ್ದಕ್ಕೆ ತುಸು ಸಮಾಧಾನವಾಗುತ್ತಿದ್ದಂತೆಯೇ ಚಿಕ್ಕಮಗಳೂರಿನಲ್ಲಿ ಮತ್ತೊಂದು ಪ್ರವಾಸಿ ಯುವತಿ ನಾಪತ್ತೆ ಪ್ರಕರಣ ವರದಿಯಾಗಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕುಟುಂಬದ ಜೊತೆ ಪ್ರವಾಸಕ್ಕೆ ಬಂದಿದ್ದ ಕೇರಳದ ಪಾಲಕ್ಕಾಡ್ ಮೂಲದ ನಂದನಾ (ವಯಸ್ಸು ಸುಮಾರು 22) ಎಂಬ ಯುವತಿ ಚಾರಣದ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಕುಟುಂಬದ 40 ಸದಸ್ಯರ ತಂಡದಲ್ಲಿ ಭಾಗವಹಿಸಿದ್ದ ನಂದನಾ, ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುತ್ತಾ ತೆರಳುವಾಗ ತಂಡದಿಂದ ಬೇರ್ಪಟ್ಟು ಹೋಗಿದ್ದಾಳೆ.
ಘಟನೆ ವಿವರ : ಕುಟುಂಬ ಸದಸ್ಯರು ಮೇಲಕ್ಕೆ ತಲುಪಿದ ನಂತರವೇ ನಂದನಾ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಅರಣ್ಯ ಇಲಾಖೆ ಸಿಬ್ಬಂದಿ, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಮತ್ತು ಸ್ಥಳೀಯರು ಸೇರಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚಂದ್ರದ್ರೋಣ ಪರ್ವತವು ದಟ್ಟ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಿಂದ ಕೂಡಿದ್ದು, ಮಂಜು ಮತ್ತು ಕತ್ತಲು ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ದಾರಿ ತಪ್ಪಿದರೆ ಅಪಾಯದ ಸಾಧ್ಯತೆ ಹೆಚ್ಚಿರುವುದರಿಂದ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಮಡಿಕೇರಿ ಪ್ರಕರಣದ ನಂತರ ಆತಂಕ ಕೆಲವು ದಿನಗಳ ಹಿಂದೆ ಮಡಿಕೇರಿಯ ತಡಿಯಂಡಮೋಳ್ ಪರ್ವತದಲ್ಲಿ ನಾಪತ್ತೆಯಾದ ಕೇರಳದ ಯುವತಿ ಶರಣ್ಯ ನಾಲ್ಕು ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಳು. ಆದರೆ ಈಗ ಚಿಕ್ಕಮಗಳೂರಿನಲ್ಲಿ ಮತ್ತೊಂದು ನಾಪತ್ತೆ ಪ್ರಕರಣ ವರದಿಯಾಗುತ್ತಿರುವುದು ಪ್ರವಾಸಿ ವಲಯದಲ್ಲಿ ಆತಂಕವನ್ನು ಹೆಚ್ಚಿಸಿದೆ.
ಪ್ರಸ್ತುತ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಯುವತಿ ಸುರಕ್ಷಿತವಾಗಿ ಪತ್ತೆಯಾಗುವ ನಿರೀಕ್ಷೆಯಲ್ಲಿ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಕಾಯುತ್ತಿದ್ದಾರೆ.





