ಪ್ರೀತಿಸಿ ಮದುವೆ: ಗರ್ಭಿಣಿ ಹೆಂಡತಿಯನ್ನು ಚಾಕುವಿನಿಂದ ಇರಿದು ಹತ್ಯೆ

Untitled design (19)

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್‌ಪೋಸ್ಟ್ ಬಳಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕೀರ್ತಿ (26) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಅವಿನಾಶ್ (32) ಈ ಕೊಲೆಯ ಆರೋಪಿಯಾಗಿದ್ದಾನೆ. ಈ ದಂಪತಿಯ ನಡುವಿನ ಜಗಳವೇ ಈ ದುರಂತಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ.

ಕೀರ್ತಿ ಮತ್ತು ಅವಿನಾಶ್ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮೂಲಕ ಮದುವೆಯಾಗಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಕಳೆದ ವಾರ ಇಬ್ಬರೂ ಸಂಬಂಧಿಕರೊಬ್ಬರ ಮದುವೆಯಲ್ಲಿ ಭಾಗವಹಿಸಿದ್ದ ವೇಳೆ ಖುಷಿಯಿಂದ ಕಾಣಿಸಿಕೊಂಡಿದ್ದರು. ಆದರೆ, ಈ ಖುಷಿಯ ಹಿಂದೆ ಗಂಭೀರ ಸಮಸ್ಯೆಯೊಂದು ಅಡಗಿತ್ತು. ಕೀರ್ತಿಯ ಪೋಷಕರ ಪ್ರಕಾರ, ಅವಿನಾಶ್ ತನ್ನ ಪತ್ನಿಗೆ ಡಿವೋರ್ಸ್‌ಗಾಗಿ ಕಿರುಕುಳ ನೀಡುತ್ತಿದ್ದನಂತೆ. ಇದಲ್ಲದೆ, ಕೀರ್ತಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು, ಆದರೆ ಈ ವಿಷಯವನ್ನು ಮನೆಯವರಿಗೆ ತಿಳಿಸದೆ ಗುಟ್ಟಾಗಿ ಅಬಾರ್ಷನ್ ಮಾಡಿಸಿದ್ದಳು ಎಂಬ ಆರೋಪವೂ ಇದೆ.

ADVERTISEMENT
ADVERTISEMENT

ಘಟನೆಯ ದಿನ, ಕೀರ್ತಿ ತನ್ನ ಅಮ್ಮನ ಮನೆಯಲ್ಲಿದ್ದಳು. ಬೆಳಗ್ಗೆ ಬಟ್ಟೆ ತೊಳೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಈ ವೇಳೆ ಅವಿನಾಶ್ ಆಕೆಯನ್ನು ಚಾಕುವಿನಿಂದ 10 ಬಾರಿ ಇರಿದು ಕೊಲೆಗೈದಿದ್ದಾನೆ. ತೀವ್ರವಾಗಿ ಗಾಯಗೊಂಡ ಕೀರ್ತಿ, ರಕ್ತದ ಮಡುವಿನಲ್ಲೇ ರಸ್ತೆಗೆ ಬಂದು ಕೂಗಾಡಿದ್ದಾಳೆ. ಆಕೆಯ ಗೋಳಾಟವನ್ನು ಕೇಳಿ, ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೀರ್ತಿ ಸಾವನ್ನಪ್ಪಿದ್ದಾಳೆ.

ಕೀರ್ತಿಯ ಕುಟುಂಬಸ್ಥರು ಈ ಕೊಲೆಗೆ ಅವಿನಾಶ್‌ನ ಅಕ್ಕನೇ ಕಾರಣ ಎಂದು ಆರೋಪಿಸಿದ್ದಾರೆ. ಅವಿನಾಶ್‌ನ ಕುಟುಂಬದ ಕೆಲವು ವಿಷಯಗಳು ಈ ಜಗಳಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಕೊಲೆಯ ನಂತರ, ಆರೋಪಿ ಅವಿನಾಶ್ ಸ್ಥಳದಿಂದ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

Exit mobile version