ತುರುವೇಕೆರೆಯಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿ ವಿದ್ಯಾರ್ಥಿ ಆ*ತ್ಮಹ*ತ್ಯೆ

BeFunky collage 2026 02 26T124247.590

“ನೀನೇ ಖುಷಿಯಾಗಿರು..ನಾನು ಹೋಗ್ತಾ ಇದೀನಿ..ಬಾಯ್..” ಎಂದು ತನ್ನ ಮೊಬೈಲ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಲಕಲಕುವ ಘಟನೆ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ.

ಘಟನೆಯ ವಿವರ:

ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಬಳಿಯ ಗೋಪ್ಪೆನಹಳ್ಳಿ ಗ್ರಾಮದ ಧನುಷ್ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ತುರುವೇಕೆರೆ ಪಟ್ಟಣದ ಡಿಪ್ಲೋಮಾ ಕಾಲೇಜಿನಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದನು. ಎಂದಿನಂತೆ ನಿನ್ನೆ ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದ ಧನುಷ್, ಸಂಜೆಯಾದರೂ ಮನೆಗೆ ಮರಳಿರಲಿಲ್ಲ.

ಸಂಜೆ ಮಗ ಬಾರದಿದ್ದಾಗ ಆತಂಕಗೊಂಡ ಪೋಷಕರು ಸತತವಾಗಿ ಕರೆ ಮಾಡಿದರೂ ಧನುಷ್ ಫೋನ್ ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಪೋಷಕರು ಹಾಗೂ ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಡಿಪ್ಲೋಮಾ ಕಾಲೇಜಿನ ಹಿಂಭಾಗದಲ್ಲಿ ಧನುಷ್‌ನ ಬ್ಯಾಗ್, ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿವೆ.

ಸ್ಥಳಕ್ಕೆ ಧಾವಿಸಿದ ಪೋಷಕರು ತಕ್ಷಣ ತುರುವೇಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಕಾಲೇಜಿನ ಹಿಂಭಾಗದ ನೀರಿನ ಕಟ್ಟೆಯಲ್ಲಿ ಹುಡುಕಾಟ ನಡೆಸಿದಾಗ ಧನುಷ್‌ನ ಮೃತದೇಹ ಪತ್ತೆಯಾಗಿದೆ. ಪ್ರೇಮ ವೈಫಲ್ಯ ಅಥವಾ ವೈಯಕ್ತಿಕ ಕಾರಣದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಸದ್ಯ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಒಬ್ಬ ಉದಯೋನ್ಮುಖ ವಿದ್ಯಾರ್ಥಿಯ ಸಾವು ಕುಟುಂಬಸ್ಥರಲ್ಲಿ ಮತ್ತು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ.

Exit mobile version