ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಕಾರಿನಲ್ಲಿ ದನಗಳನ್ನು ಕದ್ದೊಯ್ಯುತ್ತಿದ್ದ ಕಳ್ಳರ ವಿರುದ್ಧ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ರಾಡ್‌ನಿಂದ ದಾಳಿ ನಡೆಸಲು ಯತ್ನಿಸಿದ್ದಾರೆ. ಕಳ್ಳರು ಝೈಲೋ ಕಾರಿನಲ್ಲಿ ನಾಲ್ಕು ಹಸುಗಳನ್ನು ಕದ್ದು ತೆರಳುತ್ತಿದ್ದಾಗ, ಪೊಲೀಸರು ಕಾರನ್ನು ಅಡ್ಡಗಟ್ಟಿದ್ದಾರೆ.
ದಾಳಿಯ ಸಂದರ್ಭದಲ್ಲಿ ಕಳ್ಳರು ಕಾರನ್ನು ಚಾಲನೆ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರನ್ನು ಬೆನ್ನಟ್ಟಿ, ಚೇಸ್ ಮಾಡಿದ್ದಾರೆ. ಕೊನೆಗೆ ಕಳ್ಳರು ಕಾರನ್ನು ಬಿಟ್ಟು ಓಡಿಹೋಗಿದ್ದಾರೆ. ರಾತ್ರಿಯೇ ತೀವ್ರ ಹುಡುಕಾಟ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಝೈಲೋ ಕಾರು, ರಾಡ್, ನಾಲ್ಕು ಮೊಬೈಲ್‌ಗಳು, ಮತ್ತು ನಾಲ್ಕು ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಘಟನೆಯ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದ್ದು, ಪರಾರಿಯಾದ ಇತರ ಕಳ್ಳರಿಗಾಗಿ ಹುಡುಕಾಟ ನಡೆಯುತ್ತಿದೆ.