ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾವಲಗಾನಹಳ್ಳಿಯಲ್ಲಿ ಮನೆ ಖಾಲಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದ್ದು, ವೃದ್ಧ ದಂಪತಿಗಳಾದ ವೆಂಕಟಮ್ಮ ಮತ್ತು ನಾರಾಯಣಸ್ವಾಮಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಆದ್ಯಪ್ಪ, ಮುನಿಸ್ವಾಮಿ, ವೆಂಕಟೇಶ್ ಮತ್ತು ಮನೋಜ್ ಎಂಬವರು ಹಲ್ಲೆಗೈದ ಆರೋಪಿಗಳಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಗುಂಪು ದಂಪತಿಗಳ ಮೇಲೆ ಮನೆ ಖಾಲಿ ಮಾಡುವಂತೆ ಒತ್ತಡ ಹೇರಿತ್ತು. ಆದರೆ, ದಂಪತಿಗಳು ಖಾಲಿ ಮಾಡಲು ನಿರಾಕರಿಸಿದ್ದರಿಂದ, ಆರೋಪಿಗಳು ಏಕಾಏಕಿ ಮಚ್ಚು ಮತ್ತು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ.
ಅದೃಷ್ಟವಶಾತ್, ವೃದ್ಧ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಇವರಿಬ್ಬರನ್ನೂ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.