ಮಂಗಳೂರು: ಹಿಂದೂ ಯುವಕರು ಅನ್ಯ ಧರ್ಮದವರನ್ನು ಪ್ರೀತಿಸಿ ವಿವಾಹವಾಗಿ ಎಂದು ಕರೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ, ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯೊಂದಿಗೆ ಸುದ್ದಿಯಲ್ಲಿದ್ದಾರೆ. ಹಿಂದೂಗಳು ಧೈರ್ಯವಾಗಿ ಮತಾಂತರ ಮಾಡಿ ಎಂದು ಅವರು ಬಹಿರಂಗವಾಗಿ ಕರೆ ನೀಡಿದ್ದಾರೆ.
ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೂಲಿಬೆಲೆ, ಹಿಂದೂಗಳ ಸಂಖ್ಯೆಯನ್ನು ಹೆಚ್ಚಿಸಲು ಮತಾಂತರವನ್ನು ಒಂದು ಮಾರ್ಗವಾಗಿ ಸೂಚಿಸಿದ್ದಾರೆ. “ಇತ್ತೀಚೆಗೆ ಭಜರಂಗದಳದವರು ಸಂಕಲ್ಪ ತೊಗೊಂಡಿದ್ದಾರೆ. ಹಿಂದೂಗಳ ಸಂಖ್ಯೆಯನ್ನು ಹೇಗೆ ಹೆಚ್ಚಿಸಬಹುದು ಎಂದು ಕೇಳಿದಾಗ, ಹೆಚ್ಚು ಮಕ್ಕಳನ್ನು ಮಾಡಿ ಎಂದು ಮನವಿ ಮಾಡುತ್ತೇವೆ. ಆದರೆ ನಮ್ಮ ಜನರು 2-3 ಮಕ್ಕಳನ್ನು ಮಾಡುತ್ತಾರಾ? ಅವರಿಗೆ ತಮ್ಮ ಮಕ್ಕಳನ್ನು ಓದಿಸಿ ಡಾಕ್ಟರ್, ಇಂಜಿನಿಯರ್ ಮಾಡಬೇಕು ಎಂಬ ಆಸೆ. ಆದರೆ ಓದಿಸುವ ಸಾಮರ್ಥ್ಯ ಇಲ್ಲದಿದ್ದರೆ ಒಂದು ಇಲ್ಲವೇ ಎರಡು ಮಕ್ಕಳು ಸಾಕು ಎನ್ನುತ್ತಾರೆ,” ಎಂದು ಅವರು ವಿವರಿಸಿದ್ದಾರೆ.
ಸರ್ಕಾರದ ಕಾನೂನನ್ನು ಬಳಸಿಕೊಂಡು ಮತಾಂತರ ಮಾಡುವಂತೆ ಅವರು ಸಲಹೆ ನೀಡಿದ್ದಾರೆ. “ಬಿಜೆಪಿ ಸರ್ಕಾರವಿರುವಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಆದರೆ ಹೊಸ ಸರ್ಕಾರ ಅದನ್ನು ತೆಗೆದುಹಾಕಿತು. ಇದರರ್ಥ, ಈಗ ನೀವೂ ಮತಾಂತರ ಮಾಡಬಹುದು. ಸರ್ಕಾರವೇ ಮತಾಂತರಕ್ಕೆ ಅವಕಾಶ ನೀಡಿದೆ. ಯಾವ ರಾಷ್ಟ್ರದಲ್ಲೂ ಇಂತಹ ಪರಿಸ್ಥಿತಿ ಇಲ್ಲ. ಹಾಗಾಗಿ, ಸರ್ಕಾರದ ಕಾನೂನನ್ನು ಬಳಸಿಕೊಂಡು ಮತಾಂತರ ಮಾಡಿ,” ಎಂದು ಸೂಲಿಬೆಲೆ ಪ್ರಶ್ನಿಸಿದ್ದಾರೆ.
ಜನಸಂಖ್ಯೆಯನ್ನು ಹೆಚ್ಚಿಸಲು ಈ ರೀತಿಯ ಕಾನೂನುಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. “ಮುಂದಿನ ಪೀಳಿಗೆಗೆ ಭಾರತವನ್ನು ಬಿಟ್ಟುಕೊಡುವಾಗ, ಅದಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ, ಅಗತ್ಯವಿದ್ದರೆ ನೇಪಾಳವನ್ನೂ ಸೇರಿಸೋಣ. ಯಾರಾದರೂ ನಮ್ಮ ಸಮಾಜಕ್ಕೆ ಮತಾಂತರವಾಗಲು ಬಯಸಿದರೆ, ನಮ್ಮ ಸಮಾಜ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ. ಒಮ್ಮೆ ಮುಕ್ತ ಕಂಠದಿಂದ ಕರೆಯಿರಿ, ಎಷ್ಟು ಜನ ಸೈಲೆಂಟಾಗಿ ಸೇರಿಕೊಳ್ಳುತ್ತಾರೆ ನೋಡಿ. ಆದ್ದರಿಂದ, ಹಿಂದೂಗಳು ಮತಾಂತರ ಮಾಡಿ,” ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.
