ಬೆಂಗಳೂರು: ಪ್ರಕೃತಿ ಸಹಜವಾಗಿ ನಡೆದ ಘಟನೆಯೂ ಮನುಷ್ಯರ ನಡುವೆ ದೊಡ್ಡ ರಾಮಾಯಣಕ್ಕೆ ಕಾರಣವಾಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಬೀದಿಯ ಎರಡು ಬಿಲ್ಡಿಂಗ್‌ಗಳಲ್ಲಿ ಸಾಕಿದ್ದ ಹೆಣ್ಣು ಬೆಕ್ಕು ಮತ್ತು ಗಂಡು ಬೆಕ್ಕು ವಯೋಸಹಜತೆಯಿಂದ ಒಂದಾಗಿ, ಹೆಣ್ಣು ಬೆಕ್ಕು ನಾಲ್ಕು ಹೆಣ್ಣು ಮರಿಗಳಿಗೆ ಜನ್ಮ ನೀಡಿತು.
ಈ ಘಟನೆಯೇ ಎರಡು ಮನೆಯವರ ನಡುವೆ ತೀವ್ರ ಜಗಳಕ್ಕೆ ಕಾರಣವಾಯಿತು. ಹೆಣ್ಣು ಬೆಕ್ಕಿನ ಮಾಲೀಕೆ ಮಹಿಳೆ ಗಂಡು ಬೆಕ್ಕಿನ ಮನೆಯವರ ಬಳಿ ಹೋಗಿ “ನಿಮ್ಮ ಬೆಕ್ಕೇ ಕಾರಣ” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾಳೆ. ಇಷ್ಟಕ್ಕೆ ಸೀಮಿತವಾಗದೆ, ಮರಿ ಹಾಕಿದ ನಂತರ ಮರಿಗಳನ್ನು ತಾಯಿ ಬೆಕ್ಕಿನಿಂದ ಬೇರ್ಪಡಿಸಿ ಗಂಡು ಬೆಕ್ಕಿನ ಮನೆಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾಳೆ.
ಇದರಿಂದಾಗಿ ಹೆಣ್ಣು ಬೆಕ್ಕು ಕಂಗಾಲಾಗಿ ಮರಿಗಳನ್ನು ಹುಡುಕಿಕೊಂಡು ಬಂದಿತು. ಆದರೆ ಮಹಿಳೆ “ನಾನು ಮರಿಗಳನ್ನು ಸಾಕುವುದಿಲ್ಲ” ಎಂದು ಹಠ ಹಿಡಿದಿದ್ದಾಳೆ. ಜಗಳ ತಾರಕಕ್ಕೇರಿ ಹೆಣ್ಣು ಬೆಕ್ಕಿಗೆ ಪೈಪಿನಿಂದ ಹಲ್ಲೆ ಮಾಡಿದ್ದಾಳೆ ಎಂಬ ಆರೋಪವೂ ಇದೆ.
ಗಂಡು ಬೆಕ್ಕಿನ ಮನೆಯವರು ತಕ್ಷಣ 112ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಶೇಷಾದ್ರಿಪುರಂ ಪೊಲೀಸ್ ಗಸ್ತು ಸಿಬ್ಬಂದಿ ಎರಡೂ ಪಕ್ಷಗಳನ್ನು ಸಮಾಧಾನಪಡಿಸಿ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಆದರೆ ಜಗಳದ ವೇಳೆ ಹೆಣ್ಣು ಬೆಕ್ಕಿನ ಮಾಲೀಕೆ “ನಿಮ್ಮ ಮನೆ ಮಕ್ಕಳು ಟ್ಯೂಷನ್‌ಗೆ ಬರುವಾಗ ಮುಖಕ್ಕೆ ಆಸಿಡ್ ಹಾಕುತ್ತೇನೆ” ಎಂದು ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಗಂಡು ಬೆಕ್ಕಿನ ಮಾಲೀಕರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದೂರು ದಾಖಲಿಸಲು ನಿರ್ಧರಿಸಿದ್ದಾರೆ.
ಪಾಪ ಆ ಎರಡು ಮೂಕ ಪ್ರಾಣಿಗಳು ಮತ್ತು ಅವುಗಳ ನಾಲ್ಕು ಮರಿಗಳು ಈ ಮನುಷ್ಯರ ಜಗಳದ ನಡುವೆ ಸಿಲುಕಿವೆ. ಬೆಕ್ಕುಗಳ ಸಹಜ ವರ್ತನೆಯೂ ನೆರೆಯವರ ನಡುವೆ ಇಂತಹ ರಾಮಾಯಣಕ್ಕೆ ಕಾರಣವಾಗುತ್ತದೆ ಎಂಬುದು ವಿಪರ್ಯಾಸವೇ ಸರಿ.





