ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದುಬಿದ್ದಿದೆ. ಈ ಭೀಕರ ದುರ್ಘಟನೆಯಲ್ಲಿ ಮೂವರು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ದುರ್ಮರಣಕ್ಕೀಡಾಗಿದ್ದು, ಈ ಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು, “ಕಾಂಪೌಂಡ್ ಗೋಡೆಯ ಪಕ್ಕದಲ್ಲೇ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಮತ್ತು ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪಡೆದಿದ್ದವರ ಮೇಲೆ ಸೂಕ್ತ ನಿರ್ವಹಣೆ ಇಲ್ಲದ ಹಳೆಯ ಗೋಡೆ ಕುಸಿದು ಬಿದ್ದಿದೆ. ಈ ಸಾವುಗಳು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿವೆ” ಎಂದು ವಿಷಾದಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೇ ಈ ಪಾಡಾದರೆ ಉಳಿದ ಕಡೆ ಗತಿ ಏನು?
ಈ ಭೀಕರ ದುರ್ಘಟನೆಗೆ ಹೊಣೆ ಹೊತ್ತು ರಾಜ್ಯ ಸರ್ಕಾರ ಗಾಯಗೊಂಡವರಿಗೆ ಚಿಕಿತ್ಸೆ, ಮೃತ ಕುಟುಂಬದವರಿಗೆ ಸಾಂತ್ವನ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದ ಬಿ.ವೈ. ವಿಜಯೇಂದ್ರ.
ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದ ಬಿ.ವೈ. ವಿಜಯೇಂದ್ರ, ಮಳೆಗೆ ಇನ್ನೊಂದು ಅವಘಡ ಸಂಭವಿಸದಂತೆ ಶಿಥಿಲ ನಿರ್ಮಾಣಗಳ ದುರಸ್ತಿ ಸೇರಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ ವಿಜಯೇಂದ್ರ ಅವರು, ಪುಟ್ಟ ಮಕ್ಕಳ ಕುಟುಂಬದ ಸದಸ್ಯರು ಸೇರಿದಂತೆ ಮೃತಪಟ್ಟವರ ಎಲ್ಲ ಕುಟುಂಬದವರಿಗೆ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.





