ಗನ್ ಹಿಡಿದು ಜ್ಯುವೆಲ್ಲರಿ ಶಾಪ್ ರಾಬರಿ: ಸಿಸಿಟಿವಿಯಲ್ಲಿ ಕೃತ್ಯ ಸೆರೆ!

Untitled design (19)

ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿ ಗೇಟ್‌ನಲ್ಲಿರುವ ರಾಮ್ ಜ್ಯುವೆಲರ್ಸ್‌ನಲ್ಲಿ ಗುರುವಾರ ರಾತ್ರಿ 8:30ರ ಸುಮಾರಿಗೆ ಮೂವರು ಮುಸುಕುಧಾರಿಗಳು ಗನ್‌ಪಾಯಿಂಟ್‌ನಲ್ಲಿ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ.

ಅಂಗಡಿ ಮುಚ್ಚುವ ಸಮಯದಲ್ಲಿ ಈ ದರೋಡೆ ಸಂಭವಿಸಿದೆ. ಜ್ಯುವೆಲರಿ ಮಾಲೀಕ ಕನ್ನಯ್ಯಲಾಲ್ ಅಂಗಡಿಯನ್ನು ಮುಚ್ಚಲು ತಯಾರಾಗುತ್ತಿದ್ದಾಗ, ಮೂವರು ದರೋಡೆಕೋರರು ಗನ್ ಹಿಡಿದು ಅಂಗಡಿಯೊಳಗೆ ನುಗ್ಗಿದ್ದಾರೆ. ಅವರು ಮಾಲೀಕ ಮತ್ತು ಸಿಬ್ಬಂದಿಯನ್ನು ಬೆದರಿಸಿ, ಟೇಬಲ್ ಮೇಲಿದ್ದ ಚಿನ್ನಾಭರಣಗಳನ್ನು ತಮ್ಮ ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ. ಕನ್ನಯ್ಯಲಾಲ್ ಕೂಗಿಕೊಂಡರೂ, ದರೋಡೆಕೋರರು ಅವರನ್ನು ಮತ್ತು ಸಿಬ್ಬಂದಿಯನ್ನು ತಳ್ಳಿ, ಲೂಟಿ ಮಾಡಿದ ಚಿನ್ನವನ್ನು ಒಯ್ದಿದ್ದಾರೆ.

ಘಟನೆಯ ಸದ್ದು ಕೇಳಿ ಪಕ್ಕದ ಅಂಗಡಿಯಿಂದ ಒಬ್ಬ ವ್ಯಕ್ತಿ ಓಡಿಬಂದಿದ್ದಾನೆ. ಆದರೆ, ದರೋಡೆಕೋರರು ಆತನನ್ನೂ ತಳ್ಳಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಕೈಗೆ ಸಿಕ್ಕ ಚಿನ್ನಾಭರಣಗಳನ್ನು ದೋಚಿಕೊಂಡ ಈ ಮೂವರು ದರೋಡೆಕೋರರು ತಪ್ಪಿಸಿಕೊಂಡಿದ್ದಾರೆ.

ಈ ಘಟನೆಯ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Exit mobile version