ಬನಶಂಕರಿ ಪೊಲೀಸರು ಗುರುದೀಪ್ ಸಿಂಗ್ ಎಂಬ 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದು, 45ಕ್ಕೂ ಅಧಿಕ ಯುವತಿಯರು ಮತ್ತು ಮಹಿಳೆಯರ ಅಶ್ಲೀಲ ಫೋಟೊ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಆಘಾತಕಾರಿ ಪ್ರಕರಣದ ತನಿಖೆಯಲ್ಲಿ ಹಲವು ಆಶ್ಚರ್ಯಕರ ವಿಷಯಗಳು ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ ಆರೋಪಿಯು ಕೆಲವರಿಂದ ಹಣ ಪಡೆದು ವಿಡಿಯೋಗಳನ್ನು ಡಿಲೀಟ್ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.
ಕೆ.ಆರ್. ಪುರಂನ ನಿವಾಸಿಯಾದ ಗುರುದೀಪ್ ಸಿಂಗ್ ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯರು ಮತ್ತು ಮಹಿಳೆಯರನ್ನು ಗುಟ್ಟಾಗಿ ಚಿತ್ರೀಕರಿಸಿ, ಆ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದ. ಒಬ್ಬ ಯುವತಿಯ ದೂರಿನ ಆಧಾರದಲ್ಲಿ ಸುಮೋಟೋ ಕೇಸ್ ದಾಖಲಿಸಿದ ಬನಶಂಕರಿ ಪೊಲೀಸರು ಎರಡು ದಿನಗಳ ಹಿಂದೆ ಆತನನ್ನು ಬಂಧಿಸಿದರು. ವಿಚಾರಣೆ ವೇಳೆ ಆತನ ಮೊಬೈಲ್‌ನಲ್ಲಿ 45ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ, ಆದರೆ ಆತ ಕೇವಲ 12 ವಿಡಿಯೋಗಳನ್ನು ಉಳಿಸಿಕೊಂಡಿದ್ದಾನೆ. ಉಳಿದವುಗಳನ್ನು ಡಿಲೀಟ್ ಮಾಡಿರುವ ಶಂಕೆಯಿದೆ.
ಗುರುದೀಪ್ ಸಿಂಗ್ ಯುವತಿಯರು ತಮ್ಮ ಗೆಳೆಯರೊಂದಿಗೆ ಇರುವ ವಿಡಿಯೋಗಳನ್ನು ಚಿತ್ರೀಕರಿಸಿ, ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ. ಕುಟುಂಬಸ್ಥರಿಗೆ ಗೊತ್ತಾಗುವ ಭಯದಿಂದ ಕೆಲವು ಯುವತಿಯರು ಆತನಿಗೆ ಹಣ ನೀಡಿ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಆರೋಪಿಯು ಇಂಡಿಯನ್ ವಾಕ್ ಎಂ ಒನ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾನೆ, ಇವುಗಳು ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದಿವೆ. ಈ ವಿಡಿಯೋಗಳಿಗೆ ಕೆಟ್ಟ ಕಾಮೆಂಟ್‌ಗಳು ಮತ್ತು ಕಿಡಿಗೇಡಿಗಳಿಂದ ಮೆಸೇಜ್‌ಗಳು ಬಂದಿವೆ, ಇದರಿಂದ ಯುವತಿಯರು ಮಾನಸಿಕವಾಗಿ ಕುಗ್ಗಿದ್ದಾರೆ.
ಒಬ್ಬ ಯುವತಿಯು ಚರ್ಚ್ ಸ್ಟ್ರೀಟ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಇದ್ದಾಗ ಗುರುದೀಪ್ ಸಿಂಗ್ ಆಕೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾನೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ನಂತರ, ಆಕೆಯ ಸ್ನೇಹಿತರು, ಕುಟುಂಬಸ್ಥರು, ಮತ್ತು ಸಂಬಂಧಿಕರು ಆಕೆಯನ್ನು ಟೀಕಿಸಿದ್ದಾರೆ. ಆಕೆ ಆರೋಪಿಯನ್ನು ಸಂಪರ್ಕಿಸಿ ವಿಡಿಯೋ ಡಿಲೀಟ್ ಮಾಡಲು ಕೇಳಿದಾಗ, ಆತ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಹಣವಿಲ್ಲದ ಕಾರಣ, ಯುವತಿಯು ರೆಡ್ಟಿಟ್ನಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಳು. ಇದರಿಂದ ಎಚ್ಚೆತ್ತ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದರು.
ಕಳೆದ ತಿಂಗಳು ಜೂನ್ 16 ರಂದು ಬನಶಂಕರಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದರು. ಯುವತಿಯ ರೆಡ್ಟಿಟ್ ಪೋಸ್ಟ್‌ನಿಂದ ಹಿರಿಯ ಅಧಿಕಾರಿಗಳು ಆರೋಪಿಯ ಬಂಧನಕ್ಕೆ ಸೂಚನೆ ನೀಡಿದರು. ಸದ್ಯ ಆರೋಪಿಯು ಹಲವು ಯುವತಿಯರಿಂದ ಹಣ ಪಡೆದು ವಿಡಿಯೋ ಡಿಲೀಟ್ ಮಾಡಿರುವ ಶಂಕೆಯ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣವು ಸಾಮಾಜಿಕ ಜಾಲತಾಣಗಳ ದುರುಪಯೋಗ ಮತ್ತು ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.ವೊಇಉಒಇ





