ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಸ್ಟಾರ್ ಆಗಿರುವ ಮೈಸೂರು ಮೂಲದ ಮೋನಿಕಾ ಮತ್ತು ಬೆಂಗಳೂರಿನ ಹೊಯ್ಸಳ ಪೊಲೀಸ್ ಕಾನ್‌ಸ್ಟೇಬಲ್ ರಾಘವೇಂದ್ರ ನಡುವಿನ ಪ್ರೇಮ ಕಥೆಯು ಇದೀಗ ದೊಡ್ಡ ಟ್ವಿಸ್ಟ್ ತೆಗೆದುಕೊಂಡಿದೆ. ಇಬ್ಬರೂ ಮದುವೆಯಾಗಿ ಮಕ್ಕಳಿದ್ದರೂ ಎರಡೇ ತಿಂಗಳ ಪರಿಚಯದಲ್ಲಿ ಪ್ರೇಮಕ್ಕೆ ಬೀಳುವುದು, ರಾತ್ರೋರಾತ್ರಿ ಗಂಡನ ಬಳಿ ಇದ್ದ ಬಂಗಾರ-ಹಣ ದೋಚಿ ಪರಾರಿಯಾಗುವುದು, ಇದು ಸಿನಿಮಾದ ಕಥೆಯಲ್ಲ, ನಿಜ ಜೀವನದ ಘಟನೆ.
ಪ್ರೇಮ ಹೇಗೆ ಶುರು?
ಉತ್ತರ ಕರ್ನಾಟಕ ಮೂಲದ ರಾಘವೇಂದ್ರ HSR ಲೇಔಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಮೈಸೂರಿನ ಮೋನಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿ ಸಾಕಷ್ಟು ಫೇಮಸ್ ಆಗಿದ್ದರು. ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ದಲ್ಲಿ ಪರಿಚಯವಾಗಿ ಚಾಟಿಂಗ್ ಶುರು. ಎರಡೇ ತಿಂಗಳಲ್ಲಿ ಪ್ರೇಮ ಗಾಢವಾಗಿ “ನೀನೇ ಎಲ್ಲಾ, ನೀನಿಲ್ಲದಿದ್ದರೆ ನಾನೂ ಇಲ್ಲ” ಎಂಬ ಮಟ್ಟಕ್ಕೆ ಬಂದಿತು.
ಮೋನಿಕಾ ಈಗಾಗಲೇ ಮದುವೆಯಾಗಿ 12 ವರ್ಷದ ಮಗನಿದ್ದರು. ರಾಘವೇಂದ್ರ ಕೂಡ ಮದುವೆಯಾಗಿದ್ದರು. ಆದರೂ ಇಬ್ಬರೂ ತಮ್ಮ ತಮ್ಮ ಕುಟುಂಬವನ್ನು ಬಿಟ್ಟು ಒಟ್ಟಾಗಿ ಜೀವನ ಶುರು ಮಾಡಲು ನಿರ್ಧರಿಸಿದರು.
ಕಳೆದ ತಿಂಗಳು ರಾತ್ರೋರಾತ್ರಿ ಮೋನಿಕಾ ಗಂಡನ ಬಳಿ ಇದ್ದ 160 ಗ್ರಾಂ ಚಿನ್ನಾಭರಣ ಮತ್ತು ₹1.80 ಲಕ್ಷ ನಗದು ದೋಚಿ ರಾಘವೇಂದ್ರನ ಜೊತೆ ಪರಾರಿಯಾದರು. ಇಬ್ಬರೂ ಮೊದಲು ಮೈಸೂರಿಗೆ, ನಂತರ ಇತರೆಡೆಗೆ ತೆರಳಿದ್ದಾರೆ ಎನ್ನಲಾಗಿದೆ.
ಈ ಘಟನೆ ಬೆಳಕಿಗೆ ಬಂದ ತಕ್ಷಣ ಬೆಂಗಳೂರು ಪೊಲೀಸ್ ಆಯುಕ್ತರು ರಾಘವೇಂದ್ರನನ್ನು ಸಸ್ಪೆಂಡ್ ಮಾಡಿದ್ದಾರೆ. ಆದರೆ ಅಮಾನತು ಆದರೂ ರಾಘವೇಂದ್ರ ಬುದ್ಧಿ ಕಲಿಯದೇ ಮೋನಿಕಾ ಜೊತೆಯೇ ಇದ್ದಾನೆ ಎಂಬ ಮಾಹಿತಿ ಇದೆ.
ಮೋನಿಕಾ ಅವರ ಪತಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ರಾಘವೇಂದ್ರ ಮೋನಿಕಾ ಜೊತೆ ಸೇರಿ ತನಗೆ ಮತ್ತು 12 ವರ್ಷದ ಮಗನಿಗೆ ಕೊಲೆ ಬೆದರಿಕೆ ಕೊಟ್ಟಿದ್ದಾನೆ ಎಂಬ ಆರೋಪವಿದೆ. ಮೂರು ತಿಂಗಳ ಹಿಂದೆ ಮೋನಿಕಾ ತಾನೇ ಗಂಡನ ವಿರುದ್ಧ “ಬುದ್ಧಿ ಹೇಳಿ” ಎಂದು ಚಂದ್ರಾಲೇಔಟ್ ಠಾಣೆಯಲ್ಲಿ ದೂರು ನೀಡಿದ್ದರು ಎಂಬುದು ಇದೀಗ ಬಯಲಾಗಿದೆ.
ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಲು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಪ್ರಕರಣ ಇನ್ನಷ್ಟು ಟ್ವಿಸ್ಟ್‌ಗಳನ್ನು ತಂದೊಡ್ಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಾರೆ, ಇನ್‌ಸ್ಟಾ ಪ್ರೇಮದಿಂದ ಶುರುವಾದ ಈ ಕಥೆಯು ಇದೀಗ ಕಾನೂನು ತೊಡಕಿನಲ್ಲಿ ಸಿಕ್ಕಿಬಿಟ್ಟಿದೆ.





