2025ಕ್ಕೆ ಗುಡ್‌ಬೈ ಹೇಳಿ ಹೊಸ ವರ್ಷ 2026ನ್ನು ಜನತೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಬೆಂಗಳೂರಿನ ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜನಸಾಗರವೇ ಹರಿದುಬಂದಿತ್ತು. ಯುವಕ-ಯುವತಿಯರು ಕುಣಿದು ಕುಪ್ಪಳಿಸಿ, ಸಂಭ್ರಮದಲ್ಲಿ ಮಿಂದಿದ್ದರು.
ಆದರೆ ಈ ಸಂಭ್ರಮಾಚರಣೆಯ ಮಧ್ಯೆಯೇ ಕೆಲವು ಕಿರಿಕಿರಿ ಘಟನೆಗಳು ನಡೆದಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಗೆಳೆಯನಿಗೆ ಹೊಡೆದ ಯುವತಿ!
ಓಪೇರಾ ರಸ್ತೆಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಂದಿದ್ದ ಜೋಡಿ ನಡುರೋಡಲ್ಲೇ ಹೈ ಡ್ರಾಮಾ ಸೃಷ್ಟಿಸಿದ್ದಾರೆ. ನಶೆಯ ಮತ್ತಿನಲ್ಲಿ ಯುವತಿ ತನ್ನ ಪ್ರೇಮಿಯ ಮೇಲೆ ಹಲ್ಲೆ ಮಾಡಿದ್ದಾಳೆ. ಜೋಡಿಯನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಂತಿಮವಾಗಿ ಕುಡಿದು ಟೈಟಾದ ಪ್ರೇಯಸಿಯನ್ನು ಯುವಕ ಮಗುವಿನಂತೆ ಹೊತ್ತೊಯ್ದು ಮನೆಗೆ ಕರೆದೊಯ್ದಿದ್ದಾನೆ.
ಕೋರಮಂಗಲ ಪಬ್‌ನಲ್ಲಿ ಗಲಾಟೆ
ಕೋರಮಂಗಲದ ಟೋಕಾ ಪಬ್‌ನಲ್ಲಿ ಯುವಕರಿಬ್ಬರ ನಡುವೆ ಗಲಾಟೆ ನಡೆದಿದೆ. ಈ ಜಗಳದಲ್ಲಿ ಒಬ್ಬ ಯುವಕನ ತಲೆಗೆ ಗಾಯವಾಗಿದೆ. ಗಾಯಾಳುವನ್ನು ಪೊಲೀಸರು ವಶಕ್ಕೆ ಪಡೆದು ಆ್ಯಂಬುಲೆನ್ಸ್‌ಗೆ ಕಳುಹಿಸಲು ಪ್ರಯತ್ನಿಸಿದ್ದಾರೆ. ಆದರೆ ಯುವಕ ಹಿಂದೇಟು ಹಾಕಿದ್ದಕ್ಕೆ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ.
ಬ್ರಿಗೇಡ್ ರೋಡ್‌ನಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಲಾಠಿ ಚಾರ್ಜ್
ಬ್ರಿಗೇಡ್ ರೋಡ್‌ನಲ್ಲಿ ನಡು ರಸ್ತೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಖುಷಿಯಲ್ಲಿ ಪಟಾಕಿ ಹಚ್ಚಿದ್ದ ಯುವಕರು ಲಾಠಿ ರುಚಿ ನೋಡಿ ಎದೆಬಿದ್ದಂತೆ ಓಡಿ ಹೋಗಿದ್ದಾರೆ.
ಈ ಎಲ್ಲಾ ಘಟನೆಗಳ ಹೊರತಾಗಿಯೂ ನಗರದಲ್ಲಿ ಯಾವುದೇ ದೊಡ್ಡ ಅಹಿತಕರ ಘಟನೆ ನಡೆದಿಲ್ಲ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖುದ್ದು ಫೀಲ್ಡ್‌ಗಿಳಿದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸುರಕ್ಷತೆಗಾಗಿ ನೀಡಿದ ಸೇವೆಗೆ ಕೆಲವರು ಆಯುಕ್ತರಿಗೆ ಹೂವಿನ ಗುಚ್ಛ ನೀಡಿ ಅಭಿನಂದಿಸಿದ್ದಾರೆ.
ಹೊಸ ವರ್ಷದ ಸಂಭ್ರಮವನ್ನು ಸುರಕ್ಷಿತವಾಗಿ ಆಚರಿಸಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು!





