ಹೊಸ ವರ್ಷ 2026ರ ಭರ್ಜರಿ ಸಂಭ್ರಮದ ಮಧ್ಯೆ ನಗರದ ಹೃದಯಭಾಗದಲ್ಲಿ ಭಯಾನಕ ಘಟನೆ ನಡೆದಿದೆ. ಕಾರ್ಪೋರೇಷನ್ ಸರ್ಕಲ್ ಬಳಿ ನ್ಯೂ ಇಯರ್ ಪಾರ್ಟಿ ಮತ್ತಿನಲ್ಲಿ ಕುಡಿದ ಯುವಕರ ಗುಂಪು ಕ್ಯಾಬ್ ಚಾಲಕನ ಮೇಲೆ ನಡುರಸ್ತೆಯಲ್ಲೇ ಅಮಾನುಷ ಹಲ್ಲೆ ನಡೆಸಿದೆ. ಈ ಘಟನೆ ಜನವರಿ 1ರ ತಡರಾತ್ರಿ ಸುಮಾರು 3:15ಕ್ಕೆ ನಡೆದಿದೆ.
ಕ್ಷುಲಕ ಕಾರಣಕ್ಕೆ ತಾರಕಕ್ಕೇರಿದ ಗಲಾಟೆಯಲ್ಲಿ 10ಕ್ಕೂ ಹೆಚ್ಚು ಯುವಕರು ಚಾಲಕನನ್ನು ಸುತ್ತುವರೆದು ತಳ್ಳಾಟ ಮತ್ತು ಹೊಡೆದಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಗುಂಪನ್ನು ಚದುರಿಸಿ ಚಾಲಕನನ್ನು ರಕ್ಷಿಸಿದ್ದಾರೆ.
ನಿಜವಾಗಿ ಆಗಿದ್ದೇನು?
ಹೊಸ ವರ್ಷಾಚರಣೆಯಲ್ಲಿ ಕುಡಿದ ಮತ್ತಿನಲ್ಲಿ ಓಡಾಡುತ್ತಿದ್ದ ಯುವಕರ ಗುಂಪು ಕಾರ್ಪೋರೇಷನ್ ಸರ್ಕಲ್ ಬಳಿ ನಿಂತಿದ್ದ ಕ್ಯಾಬ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ವೇಳೆ ಕ್ಯಾಬ್ ಚಾಲಕ ಕೆಳಗಿಳಿದು “ಏಕೆ ಕಾರಿಗೆ ಡಿಕ್ಕಿ ಹೊಡೆದಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
ಆದರೆ ಉತ್ತರ ನೀಡುವ ಬದಲು ಯುವಕರು ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರುಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಕ್ಷಣಾರ್ಧದಲ್ಲಿ ಗಲಾಟೆ ತೀವ್ರಗೊಂಡಿದೆ. ಕುಡಿದ ಮತ್ತಿನಲ್ಲಿದ್ದ ಗುಂಪು ಚಾಲಕನನ್ನು ಸುತ್ತುವರೆದು ನಡುರಸ್ತೆಯಲ್ಲೇ ತೀವ್ರ ತಳ್ಳಾಟ ಮತ್ತು ಹೊಡೆದಾಟಕ್ಕೆ ಇಳಿದಿದೆ.
ಈ ಘಟನೆಯಿಂದ ನಗರದ ನ್ಯೂ ಇಯರ್ ಸಂಭ್ರಮಕ್ಕೆ ಕಿರಿಕಿರಿ ಛಾಯೆ ಬೀಳುವಂತಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಚಾಲಕನನ್ನು ರಕ್ಷಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.





