ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ: ಮಟನ್ ಆರ್ಡರ್ ಮಾಡಿದ್ದಕ್ಕೆ ಬಂದಿದ್ದು ದನದ ಮಾಂಸ!

BeFunky collage (8)

ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ವಂಚನೆ ಬೆಳಕಿಗೆ ಬಂದಿದೆ. ಮಟನ್ ಬಿರಿಯಾನಿ ಮತ್ತು ಮಟನ್ ಊಟ ಎಂದು ನಂಬಿ ಆರ್ಡರ್ ಮಾಡಿದ ಗ್ರಾಹಕರಿಗೆ ದನದ ಮಾಂಸ (ಬೀಫ್) ಉಣಿಸಿದ ಘಟನೆ ಬೂದಿಗೆರೆ ಕ್ರಾಸ್ ಬಳಿ ನಡೆದಿದೆ. ಈ ಪ್ರಕರಣದಲ್ಲಿ ರೆಸ್ಟೋರೆಂಟ್ ಮಾಲೀಕರಾದ ಇಬ್ಬರನ್ನು ಆವಲಹಳ್ಳಿ ಪೊಲೀಸರು ಬಂಧಿಸಿ, ಕಠಿಣ ವಿಚಾರಣೆ ನಡೆಸಿದ್ದಾರೆ.

ಘಟನೆ ಹೇಗೆ ಬೆಳಕಿಗೆ ಬಂದಿತು?

ಕೆಲವು ದಿನಗಳ ಹಿಂದೆ ಯುವಕರ ಗುಂಪೊಂದು ಬೂದಿಗೆರೆ ಕ್ರಾಸ್ ಬಳಿಯ ‘ಕಾಯಲೋರಂ’ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿತ್ತು. ಅಲ್ಲಿ ಅವರು ಮಟನ್ ಊಟ ಆರ್ಡರ್ ಮಾಡಿದ್ದರು. ಆದರೆ ಸಿಬ್ಬಂದಿ ತಂದುಕೊಟ್ಟ ಮಾಂಸದ ರುಚಿ ಸಂಶಯಕ್ಕೆ ಕಾರಣವಾಯಿತು. ಇದು ಮಟನ್ ಅಲ್ಲ ಎಂದು ಅನುಮಾನಿಸಿದ ಯುವಕರು ತಕ್ಷಣವೇ ಹೋಟೆಲ್ ಮ್ಯಾನೇಜರ್‌ನ್ನು ಪ್ರಶ್ನಿಸಿದ್ದಾರೆ. ಸರಿಯಾದ ಉತ್ತರ ಬರದಿದ್ದಾಗ ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ತಕ್ಷಣ ರೆಸ್ಟೋರೆಂಟ್‌ಗೆ ಲಗ್ಗೆ ಇಟ್ಟು ಪರಿಶೀಲಿಸಿದಾಗ, ಅಡುಗೆ ಕೋಣೆಯಲ್ಲಿದ್ದ ಮಾಂಸ ದನದ ಮಾಂಸ ಎಂದು ದೃಢಪಟ್ಟಿದೆ. ರೆಸ್ಟೋರೆಂಟ್ ಮಾಲೀಕರಾದ ಜೀಜು ಮತ್ತು ಶಿಬು ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದ ತಕ್ಷಣ ರೆಸ್ಟೋರೆಂಟ್‌ಗೆ ಬೀಗ ಹಾಕಲಾಗಿದೆ.

ಹಲವು ತಿಂಗಳಿಂದಲೂ ವಂಚನೆ?

ಪೊಲೀಸ್ ತನಿಖೆಯಲ್ಲಿ ಇನ್ನೊಂದು ಆಘಾತಕಾರಿ ಸತ್ಯ ಬಯಲಾಗಿದೆ. ಕಳೆದ ಒಂದೂವರೆ ವರ್ಷದಿಂದಲೂ ಈ ರೆಸ್ಟೋರೆಂಟ್ ಮಟನ್ ಎಂದು ನಂಬಿಸಿ ದನದ ಮಾಂಸವನ್ನು ಗ್ರಾಹಕರಿಗೆ ಉಣಿಸುತ್ತಿತ್ತು ಎಂದು ತಿಳಿದುಬಂದಿದೆ. ನೂರಾರು ಗ್ರಾಹಕರು ಈ ವಂಚನೆಗೆ ಬಲಿಯಾಗಿರುವ ಸಾಧ್ಯತೆ ಇದೆ.

ಪೊಲೀಸ್ ಕ್ರಮ ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ವಿರುದ್ಧ ಆಹಾರ ವಂಚನೆ, ಸಾರ್ವಜನಿಕರ ಭಾವನೆಗಳನ್ನು ಗಾಯಗೊಳಿಸಿದ ಆರೋಪಗಳಡಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಈ ಘಟನೆಯು ಬೆಂಗಳೂರಿನಲ್ಲಿ ಆಹಾರ ವ್ಯವಹಾರದಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯ ಮುನ್ಸೂಚನೆ ನೀಡಿದೆ. ಗ್ರಾಹಕರು ಆಹಾರ ಆರ್ಡರ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

Exit mobile version