80s ಫೋಟೋ ಟ್ರೆಂಡ್‌ ಬೆನ್ನತ್ತಿದ್ದ ವ್ಯಕ್ತಿಗೆ ಸೈಬರ್ ವಂಚಕರಿಂದ ಬ್ಲ್ಯಾಕ್‌ಮೇಲ್!

Your paragraph text 2026 09 18T222719.493

ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ 80ರ ದಶಕದ ರೆಟ್ರೋ ಲುಕ್ ಫೋಟೋ ಟ್ರೆಂಡ್ ಇದೀಗ ಸೈಬರ್ ಅಪರಾಧಿಗಳ ವಂಚನೆಗೆ ಹೊಸ ಅಸ್ತ್ರವಾಗುತ್ತಿದೆ. AI ತಂತ್ರಜ್ಞಾನದ ಮೂಲಕ ತಮ್ಮ ಫೋಟೋಗಳನ್ನು ರೆಟ್ರೋ ಶೈಲಿಗೆ ಬದಲಾಯಿಸಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬರು ನಕಲಿ AI ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಹಲವರು ತಮ್ಮ ಫೋಟೋಗಳನ್ನು 80ರ ದಶಕದ ಶೈಲಿಯಲ್ಲಿ ಎಡಿಟ್ ಮಾಡಿಕೊಂಡು ಸ್ಟೇಟಸ್ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ಟ್ರೆಂಡ್‌ನಿಂದ ಪ್ರೇರಿತರಾದ ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ನಿವಾಸಿ, 45 ವರ್ಷದ ವಿನೋದ್ ಕೂಡ ತಮ್ಮ ಫೋಟೋವನ್ನು ರೆಟ್ರೋ ಲುಕ್‌ಗೆ ಬದಲಾಯಿಸಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಚಾಟ್‌ಜಿಪಿಟಿ ಅಥವಾ AI ತಂತ್ರಜ್ಞಾನದ ಹೆಸರಿನಲ್ಲಿ ಲಭ್ಯವಿದ್ದ ಅಪರಿಚಿತ ಆ್ಯಪ್‌ವೊಂದನ್ನು ಅವರು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆದರೆ ಆ್ಯಪ್‌ ಇನ್‌ಸ್ಟಾಲ್ ಮಾಡಿದ ಬಳಿಕವೇ ಸಮಸ್ಯೆ ಆರಂಭವಾಗಿದೆ. ಆ್ಯಪ್ ಮೂಲಕ ಸೈಬರ್ ಅಪರಾಧಿಗಳು ಮೊಬೈಲ್ ಸಾಧನಕ್ಕೆ ಅನಧಿಕೃತ ಪ್ರವೇಶ ಪಡೆದು, ಅದರಲ್ಲಿದ್ದ ಖಾಸಗಿ ಮಾಹಿತಿಯನ್ನು ಕದ್ದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಆ್ಯಪ್‌ ಇನ್‌ಸ್ಟಾಲ್ ಮಾಡಿದ 5 ನಿಮಿಷದಲ್ಲೇ ಕರೆ!

ನಕಲಿ AI ಆ್ಯಪ್‌ ಡೌನ್‌ಲೋಡ್ ಮಾಡಿದ ಕೇವಲ ಐದು ನಿಮಿಷಗಳಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ವಿನೋದ್ ಅವರಿಗೆ ಕರೆ ಮಾಡಿದ್ದಾನೆ. ತಕ್ಷಣವೇ 50 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ ಎನ್ನಲಾಗಿದೆ.

ಹಠಾತ್ ಬಂದ ಕರೆಯಿಂದ ಆಕ್ರೋಶಗೊಂಡ ವಿನೋದ್, ಹಣ ನೀಡಲು ನಿರಾಕರಿಸಿ ಕರೆ ಮಾಡಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಸೈಬರ್ ಅಪರಾಧಿ, ಹಣ ನೀಡದಿದ್ದರೆ ವಿನೋದ್ ಅವರ ಮುಖದ ಫೋಟೋ ಬಳಸಿ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಿ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಆದರೆ ವಿನೋದ್ ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸದೆ ಕರೆ ಕಡಿತಗೊಳಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಂಚಕರು AI ತಂತ್ರಜ್ಞಾನ ಬಳಸಿಕೊಂಡು ಅವರ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ವಿನೋದ್ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಹಾಗೂ ವಿವಿಧ ವಾಟ್ಸಾಪ್ ಗ್ರೂಪ್‌ಗಳಿಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೈಬರ್ ಕ್ರೈಂ ಪೊಲೀಸರಿಗೆ ದೂರು

ತಮ್ಮ ಫೋಟೋಗಳನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡಿರುವುದರಿಂದ ಆತಂಕಕ್ಕೊಳಗಾದ ವಿನೋದ್, ತಕ್ಷಣವೇ ಸೈಬರ್ ಕ್ರೈಂ ಅಥವಾ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚನೆಯ ವಿಧಾನ ಹಾಗೂ ಆರೋಪಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಹೊಸ ಟ್ರೆಂಡ್‌ಗಳು ವೈರಲ್ ಆಗುತ್ತಿದ್ದಂತೆ ಅದೇ ಹೆಸರಿನಲ್ಲಿ ನಕಲಿ ಆ್ಯಪ್‌ಗಳು, ವೆಬ್‌ಸೈಟ್‌ಗಳು ಮತ್ತು ಲಿಂಕ್‌ಗಳನ್ನು ಸೈಬರ್ ಅಪರಾಧಿಗಳು ಸೃಷ್ಟಿಸುವ ಸಾಧ್ಯತೆ ಇದೆ. ಇಂತಹ ಆ್ಯಪ್‌ಗಳ ಮೂಲಕ ಮೊಬೈಲ್‌ನಲ್ಲಿರುವ ಫೋಟೋಗಳು, ಕಾಂಟ್ಯಾಕ್ಟ್‌ಗಳು, ವೈಯಕ್ತಿಕ ದಾಖಲೆಗಳು ಹಾಗೂ ಇತರೆ ಖಾಸಗಿ ಮಾಹಿತಿಗೆ ಕನ್ನ ಹಾಕುವ ಅಪಾಯವಿದೆ.

ಹೀಗಾಗಿ AI ಫೋಟೋ ಎಡಿಟಿಂಗ್ ಅಥವಾ ಇತರೆ ಸೇವೆಗಳಿಗಾಗಿ ಅಪರಿಚಿತ ಮೂಲಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬಾರದು. ಆ್ಯಪ್‌ ಇನ್‌ಸ್ಟಾಲ್ ಮಾಡುವ ಮುನ್ನ ಅದರ ಅಧಿಕೃತ ಮೂಲ, ಡೆವಲಪರ್ ವಿವರಗಳು ಮತ್ತು ಅನುಮತಿಗಳನ್ನು ಪರಿಶೀಲಿಸಬೇಕು.

Exit mobile version