ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ವಿಧಿಸುವ ಬಗ್ಗೆ ಗೊಂದಲಗಳಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ತೆರೆ ಎಳೆದಿದೆ. ಮೆಟ್ರೋ ಸ್ವೈಪ್ ಗೇಟ್‌ನ ಒಳಗಿರುವ ಶೌಚಾಲಯಗಳ ಬಳಕೆ ಮುಂದುವರಿದಂತೆ ಉಚಿತವಾಗಿರಲಿದೆ. ಆದರೆ, ಸ್ವೈಪ್ ಗೇಟ್‌ನ ಹೊರಗಿರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ನಿಗದಿಪಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಮೆಟ್ರೋ ಸ್ವೈಪ್ ಗೇಟ್ಗಿಂತ ಹೊರಗಿರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ನಿಗದಿ:
ಮೆಟ್ರೋ ಸ್ವೈಪ್ ಗೇಟ್‌ನ ಒಳಗಿನ ಶೌಚಾಲಯಗಳು ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಿದ್ದು, ಇವು ಉಚಿತವಾಗಿವೆ. ಆದರೆ, ಸ್ವೈಪ್ ಗೇಟ್‌ನ ಹೊರಗಿರುವ ಶೌಚಾಲಯಗಳನ್ನು ಪ್ರಯಾಣಿಕರಲ್ಲದ ಸಾರ್ವಜನಿಕರೂ ಬಳಸುತ್ತಾರೆ. ಆದ್ದರಿಂದ, ಈ ಶೌಚಾಲಯಗಳಿಗೆ ಶುಲ್ಕ ವಿಧಿಸಲಾಗಿದೆ. ಪ್ರಸ್ತುತ, 12 ಮೆಟ್ರೋ ನಿಲ್ದಾಣಗಳಲ್ಲಿ ಸ್ವೈಪ್ ಗೇಟ್‌ನ ಹೊರಗಿರುವ ಶೌಚಾಲಯಗಳಿಗೆ ಶುಲ್ಕ ಜಾರಿಯಲ್ಲಿದೆ.
ಈ ಶೌಚಾಲಯಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಿಎಂಆರ್‌ಸಿಎಲ್, ಈ ಕೆಳಕಂಡ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಿದೆ: ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ, ಯೆಲಚೇನಹಳ್ಳಿ, ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಡಾ. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಮೆಜೆಸ್ಟಿಕ್.
ಈ ಸ್ಪಷ್ಟನೆಯ ಮೂಲಕ ಬಿಎಂಆರ್‌ಸಿಎಲ್ ಶೌಚಾಲಯ ಶುಲ್ಕಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳನ್ನು ತೆರವುಗೊಳಿಸಿದೆ.