ರಾಜ್ಯ ರಾಜಧಾನಿ ಬೆಂಗಳೂರಲ್ಲಿ ರೌಡಿಗಳ ಪುಂಡಾಟಕ್ಕೆ ಕಡಿವಾಣ ಹಾಕುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಬನಶಂಕರಿ 3ನೇ ಹಂತದ ಕತ್ರಿಗುಪ್ಪೆಯಲ್ಲಿ ಸ್ಥಳೀಯ ಪುಡಿ ರೌಡಿಗಳು ಬಾಲ ಬಿಚ್ಚಿ, ಪಾನ್ ಶಾಪ್ ಮೇಲೆ ದಾಳಿ ನಡೆಸಿದ್ದಾರೆ. ಕ್ಷುಲಕ ಕಾರಣಕ್ಕೆ ಸುಮಾರು 10ಕ್ಕೂ ಹೆಚ್ಚು ರೌಡಿಗಳು ಶಾಪ್‌ಗೆ ನುಗ್ಗಿ ದಾಂಧಲೆ ನಡೆಸಿ, ಅಂಗಡಿಯಲ್ಲಿದ್ದ ಬಾಟಲ್‌ಗಳನ್ನು ಹೊಡೆದು ಧ್ವಂಸಗೊಳಿಸಿದ್ದಾರೆ.
ಘಟನೆಯು ಡಿಸೆಂಬರ್ 28ರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ. ಪಾನ್ ಶಾಪ್ ಮಾಲೀಕ ಬಶೀರ್ ಅವರು ಕಾರಿನಲ್ಲಿ ಮನೆ ಬಳಿ ಇರುವಾಗಲೇ ರೌಡಿಗಳು ಮೊದಲು ಅವರ ಮೇಲೆ ದಾಳಿ ನಡೆಸಿದ್ದಾರೆ. ನಂತರ ಶಾಪ್ ಬಳಿ ಬಂದು ಲಾಂಗು-ಮಚ್ಚುಗಳಿಂದ ಬಶೀರ್ ಹಾಗೂ ಅವರ ತಾಯಿಗೆ ಗಾಯಗೊಳಿಸಿದ್ದಾರೆ. ದಾಳಿಯ ದೃಶ್ಯಗಳು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾರಕಾಸ್ತ್ರಗಳೊಂದಿಗೆ ರೌಡಿಗಳು ದಾಳಿ ನಡೆಸುವುದು ಸ್ಪಷ್ಟವಾಗಿ ಕಂಡಿದೆ.
ಹಲ್ಲೆಗೊಳಗಾದ ಬಶೀರ್ ಹಾಗೂ ಅವರ ತಾಯಿ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾಳಿ ನಡೆಸಿದವರೆಲ್ಲಾ ಸ್ಥಳೀಯ ಏರಿಯಾದ ಹುಡುಗರು ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ.
ಈ ಘಟನೆಯಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ರೌಡಿಶೀಟರ್‌ಗಳ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಆರೋಪಿಗಳು ಬಂಧನಕ್ಕೊಳಗಾಗುವ ನಿರೀಕ್ಷೆ ಇದೆ.





