ಬೆಂಗಳೂರು: ಗಣೇಶ ಚತುರ್ಥಿಯನ್ನು ಆಚರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಒಟ್ಟು 41 ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳನ್ನು ಮತ್ತು 489 ತಾತ್ಕಾಲಿಕ ಸಂಚಾರಿ ಟ್ಯಾಂಕ್‌ಗಳನ್ನು ಎಲ್ಲಾ ವಾರ್ಡ್‌ಗಳಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.
ವಿಸರ್ಜನೆಯ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಬಿಬಿಎಂಪಿ ವೆಬ್‌ಸೈಟ್‌ನ ಲಿಂಕ್ https://apps.bbmpgov.in/ganesh2025/ ಗೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಳ್ಳಬಹುದು.

ಪ್ರಮುಖ ಕಲ್ಯಾಣಿಗಳಲ್ಲಿ ಸಕಲ ವ್ಯವಸ್ಥೆ:
ಸ್ಯಾಂಕಿಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಮತ್ತು ಇತರ ಕೆರೆಗಳ ಅಂಗಣದಲ್ಲಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಲ್ಯಾಣಿಗಳ ಆವರಣದಲ್ಲಿ ಬ್ಯಾರಿಕೇಡಿಂಗ್, ನುರಿತ ಈಜುಗಾರರು/ಜೀವರಕ್ಷಕರ ನಿಯೋಜನೆ, ಸಿಸಿಟಿವಿ ಕ್ಯಾಮೆರಾಗಳು, ವಿದ್ಯುತ್ ದೀಪಗಳು ಮತ್ತು ಪೆಂಡಾಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ವಿಸರ್ಜನೆಯಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಆಟೋ ಟಿಪ್ಪರ್‌ಗಳ ಮೂಲಕ ವಿಲೇವಾರಿ ಮಾಡಲಾಗುವುದು.
ಯಡಿಯೂರು ಕೆರೆ ಕಲ್ಯಾಣಿ
ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗಾಗಿ ಈ ವರ್ಷವೂ ಸಂಪೂರ್ಣ ತಯಾರಿ ನಡೆಸಲಾಗಿದೆ. ದಿನಾಂಕ 27-08-2025 ರಿಂದ 07-09-2025 ರವರೆಗೆ ಸಾರ್ವಜನಿಕರು ಪರಿಸರ ಸ್ನೇಹಿ ಅಥವಾ ಮಣ್ಣಿನ ಗಣೇಶ ಮೂರ್ತಿಗಳನ್ನು ಈ ಕಲ್ಯಾಣಿಯಲ್ಲಿ ವಿಸರ್ಜಿಸಲು ಅವಕಾಶವಿದೆ.
ಹಲಸೂರು ಕೆರೆ ಕಲ್ಯಾಣಿ
ಹಲಸೂರು ಕೆರೆಯ ಕಲ್ಯಾಣಿಯಲ್ಲಿ 27-08-2025 ರಿಂದ 30-09-2025 ರವರೆಗೆ ಕೇವಲ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆಗೆ ಅನುಮತಿಯಿದೆ. ಆದರೆ, 01-09-2025, 02-09-2025, 08-09-2025 ಮತ್ತು 09-09-2025 ರಂದು ಹೂಳೆತ್ತುವ ಕಾರ್ಯದಿಂದಾಗಿ ಯಾವುದೇ ಮೂರ್ತಿ ವಿಸರ್ಜನೆಗೆ ಅವಕಾಶವಿರುವುದಿಲ್ಲ.
ಹೆಬ್ಬಾಳ ಕೆರೆ ಕಲ್ಯಾಣಿ
ಹೆಬ್ಬಾಳ ಕೆರೆಯ ಕಲ್ಯಾಣಿಯಲ್ಲಿ 10-09-2025 ರವರೆಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಸ್ಯಾಂಕಿ ಕೆರೆ ಕಲ್ಯಾಣಿ
ಸ್ಯಾಂಕಿ ಕೆರೆಯ ಕಲ್ಯಾಣಿಯಲ್ಲಿ 04-09-2025 ರವರೆಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಮತಿಯಿದೆ.





