ಬೆಂಗಳೂರು: ಆಗಸ್ಟ್ 1ರಿಂದ ಬೆಂಗಳೂರಿನ ಆಟೋ ರಿಕ್ಷಾ ಪ್ರಯಾಣಿಕರಿಗೆ ಹೊಸ ದರ ಏರಿಕೆಯ ಆಘಾತ ಎದುರಾಗಲಿದೆ. ಬೆಂಗಳೂರು ಜಿಲ್ಲಾಧಿಕಾರಿಗಳ ಆದೇಶದಂತೆ, ಆಟೋ ಚಾಲಕರ ದೀರ್ಘಕಾಲದ ಬೇಡಿಕೆಗೆ ಮಣಿದು ಹೊಸ ದರ ಪಟ್ಟಿಯನ್ನು ಜಾರಿಗೆ ತರಲಾಗಿದೆ.
ಈ ದರ ಏರಿಕೆಯಿಂದ ನಗರದ ಜನರ ದೈನಂದಿನ ಪ್ರಯಾಣ ವೆಚ್ಚದ ಮೇಲೆ ಗಣನೀಯ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಹೊಸ ದರ ಪಟ್ಟಿ ವಿವರ:
ಮೊದಲ 2 ಕಿ.ಮೀ.: 36 ರೂಪಾಯಿಗಳು
ನಂತರದ ಪ್ರತಿ ಕಿ.ಮೀ.: 18 ರೂಪಾಯಿಗಳು
ಕಾಯುವಿಕೆ ಶುಲ್ಕ: ಮೊದಲ 5 ನಿಮಿಷಗಳಿಗೆ ಉಚಿತ; ನಂತರ ಪ್ರತಿ 15 ನಿಮಿಷಗಳಿಗೆ 10 ರೂಪಾಯಿಗಳು
ಲಗೇಜ್ ಶುಲ್ಕ: 20 ಕೆ.ಜಿ.ವರೆಗೆ ಉಚಿತ; 20 ಕೆ.ಜಿ.ಗಿಂತ ಮೇಲ್ಪಟ್ಟ ತೂಕಕ್ಕೆ 10 ರೂಪಾಯಿಗಳು
ರಾತ್ರಿ ಶುಲ್ಕ (ರಾತ್ರಿ 10:00 ರಿಂದ ಬೆಳಿಗ್ಗೆ 5:00): ಸಾಮಾನ್ಯ ದರಕ್ಕೆ 50% ಹೆಚ್ಚುವರಿ ಶುಲ್ಕ
ಜಿಲ್ಲಾಧಿಕಾರಿಗಳು ಎಲ್ಲ ಆಟೋ ರಿಕ್ಷಾಗಳಲ್ಲಿ ಪರಿಷ್ಕೃತ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಿದ್ದಾರೆ. ಜೊತೆಗೆ, ಆಟೋಗಳಲ್ಲಿ ಹೊಸ ದರಕ್ಕೆ ತಕ್ಕಂತೆ ಮೀಟರ್‌ಗಳನ್ನು ಅಕ್ಟೋಬರ್ 31ರೊಳಗೆ ನವೀಕರಿಸುವುದು ಕಡ್ಡಾಯವಾಗಿದೆ.
ಈ ದರ ಏರಿಕೆಯಿಂದ ಬೆಂಗಳೂರಿನ ಜನರ ದೈನಂದಿನ ಜೀವನದ ಮೇಲೆ ಭಾರವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಈಗಾಗಲೇ ಆಟೋ ಚಾಲಕರು ಮೀಟರ್ ಬಳಸದೆ, ಇಚ್ಛೆಗೆ ತಕ್ಕಂತೆ ಹೆಚ್ಚಿನ ಶುಲ್ಕ ವಿಧಿಸುವ ದೂರುಗಳು ಸಾಮಾನ್ಯವಾಗಿವೆ. ಕೆಲವು ಚಾಲಕರು ಒಂದು ಕಿಲೋಮೀಟರ್‌ಗಿಂತ ಕಡಿಮೆ ದೂರಕ್ಕೆ 100 ರೂಪಾಯಿಗಿಂತ ಹೆಚ್ಚಿನ ಶುಲ್ಕ ಕೇಳುತ್ತಿದ್ದಾರೆ ಎಂಬ ಆರೋಪವಿದೆ.
ಸಾರ್ವಜನಿಕರು, ದರ ಏರಿಕೆಗಿಂತ ಮೊದಲು ಮೀಟರ್ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೀಟರ್ ಬಳಸದ ಆಟೋ ಚಾಲಕರ ಪರವಾನಗಿಯನ್ನು ರದ್ದುಗೊಳಿಸುವಂತಹ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ. ಈ ಒತ್ತಾಯಕ್ಕೆ ಸರ್ಕಾರ ಸ್ಪಂದಿಸುವುದೇ ಎಂಬುದು ಕಾದುನೋಡಬೇಕು.