ಬೆಂಗಳೂರು: ಆನೇಕಲ್ ತಾಲೂಕಿನ ವಿನಾಯಕ ನಗರದಲ್ಲಿ ಶುಕ್ರವಾರ (ಜುಲೈ 25) ತಡರಾತ್ರಿ ಭೀಕರ ಕೊಲೆ ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ 26 ವರ್ಷದ ರವಿಕುಮಾರ್ ಎಂಬ ಯುವಕನನ್ನು ಮರದ ಮಂಚದ ಕಾಲಿನಿಂದ ಮೂರ್ನಾಲ್ಕು ಮಂದಿ ಆರೋಪಿಗಳು ಬಡಿದು ಕೊಲೆಗೈದಿದ್ದಾರೆ.
ರವಿಕುಮಾರ್, ಆನೇಕಲ್-ಅತ್ತಿಬೆಲೆ ಮುಖ್ಯ ರಸ್ತೆಯ ಬಳಿಯ ಅಮೇಜಾನ್ ಕಂಪನಿಯ ಕಾರ್ಮಿಕನಾಗಿದ್ದ. ಆತ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ಕಾರಣಕ್ಕೆ ರೊಚ್ಚಿಗೆದ್ದ ಯುವತಿಯ ತಮ್ಮ ಮತ್ತು ಆತನ ಇಬ್ಬರು ಸ್ನೇಹಿತರು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರ ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ರವಿಕುಮಾರ್ ಸಿಗರೇಟ್ ಖರೀದಿಸಲು ವಿನಾಯಕ ನಗರದ ಅಂಗಡಿಗೆ ಬಂದಿದ್ದಾಗ, ಆರೋಪಿಗಳು ಬೈಕ್‌ನಲ್ಲಿ ಆಗಮಿಸಿ ಆತನ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಮನ್ಮಥ ಎಂಬಾತನನ್ನು ಆನೇಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಸೋಲೂರು ನಿವಾಸಿಗಳಾದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ರವಿಕುಮಾರ್‌ನನ್ನು ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಶನಿವಾರ) ಬೆಳಗ್ಗೆ 7:30ಕ್ಕೆ ಆತ ಕೊನೆಯುಸಿರೆಳೆದಿದ್ದಾನೆ.
ಆನೇಕಲ್ ಠಾಣೆಯ ಎಎಸ್ಪಿ ಮತ್ತು ವಿಧಿ ವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಆನೇಕಲ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ ಆರೋಪ: ಮಾದನಾಯಕನಹಳ್ಳಿಯಲ್ಲಿ ಯುವತಿಯ ಆತ್ಮಹತ್ಯೆ
ಬೆಂಗಳೂರಿನ ಮಾದನಾಯಕನಹಳ್ಳಿಯ ಅಂಚೆ ಪಾಳ್ಯದಲ್ಲಿ ಭೀಮನ ಅಮಾವಾಸ್ಯೆ ದಿನವಾದ (ಶುಕ್ರವಾರ) ಜುಲೈ 25ರಂದು ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಸ್ಪಂದನಾ ಎಂಬ ಮಹಿಳೆ, ತನ್ನ ಪತಿ ಅಭಿಷೇಕ್‌ನೊಂದಿಗೆ ದಾಂಪತ್ಯದಲ್ಲಿ ಉಂಟಾದ ಜಗಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಭಿಷೇಕ್ ಮತ್ತು ಸ್ಪಂದನಾ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಘಟನೆಯ ದಿನ ಬೆಳಿಗ್ಗೆ 10 ಗಂಟೆಗೆ ಸ್ಪಂದನಾ ತನ್ನ ಗಂಡನಿಗೆ ಖುಷಿಯಿಂದ ಪೂಜೆ ಮಾಡಿದ್ದಳು. ಆದರೆ, 11 ಗಂಟೆಗೆ ಅಭಿಷೇಕ್‌ಗೆ ಆತನ ಕಚೇರಿಯ ಯುವತಿಯೊಬ್ಬಳಿಂದ ಬಂದ ಫೋನ್ ಕಾಲ್ ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಯಿತು. ಈ ಜಗಳದಿಂದ ನೊಂದ ಸ್ಪಂದನಾ, ರಾತ್ರಿ 12:45ಕ್ಕೆ ತನ್ನ ತಂಗಿಗೆ ಸಂದೇಶ ಕಳುಹಿಸಿ, ಮನೆಯ ಕಿಟಕಿಗೆ ನೇಣು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಪಂದನಾ ಅವರ ಕುಟುಂಬಸ್ಥರು, ಆಕೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಸ್ಪಂದನಾ ತನ್ನ ತಂದೆಗೆ ಈ ಬಗ್ಗೆ ಹಲವು ಬಾರಿ ತಿಳಿಸಿದ್ದಳು. ಅಭಿಷೇಕ್‌ನ ಕುಟುಂಬಸ್ಥರು ಯಾರಿಗೂ ಮಾಹಿತಿ ನೀಡದೆ ಮೃತದೇಹವನ್ನು ಇಳಿಸಿ ಆಸ್ಪತ್ರೆಗೆ ಸಾಗಿಸಿದ್ದರು ಎಂದು ಆರೋಪವಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.