ಮನೆಯಲ್ಲಿ ಸಣ್ಣ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ಗಲಾಟೆಯಾಗಿ, ಮನನೊಂದ ಸೊಸೆ ಆತ್ಮಹತ್ಯೆ ಮಾಡಿಕೊಂಡ ದುರಾದೃಷ್ಟಕರ ಘಟನೆ ಬೆಂಗಳೂರಿನ ಅಬ್ಬಿಗೆರೆ ಪ್ರದೇಶದಲ್ಲಿ ನಡೆದಿದೆ. ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೊಸೆ 35 ವರ್ಷದ ಟೆಕ್ಕಿ ಸುಷ್ಮಾ ಎಂಬ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಷ್ಮಾ ಅವರು 5 ವರ್ಷಗಳ ಹಿಂದೆ ಪುನೀತ್ ಕುಮಾರ್ ಎಂಬುವರನ್ನು ವಿವಾಹವಾಗಿದ್ದರು. ಮನೆಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಅತ್ತೆ ಕಲ್ಪನಾ ಮತ್ತು ಸೊಸೆ ಸುಷ್ಮಾ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಒಂದೇ ಒಲೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಮಾಡುವ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿತ್ತು, ಅಡುಗೆ ವೇಳೆ ಸೊಸೆಗೆ ಸರಿಯಾದ ಜಾಗ ಕೊಡದೇ ಇರುವುದು, ತುಪ್ಪ/ಇತರ ಸಾಮಗ್ರಿಗಳ ವಿಚಾರದಲ್ಲಿ ಜಗಳ ತೀವ್ರಗೊಂಡಿತ್ತು ಎಂದು ತಿಳಿದುಬಂದಿದೆ.
ಮನನೊಂದ ಸುಷ್ಮಾ ಅವರು ಈ ಘಟನೆಯ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸುಷ್ಮಾ ಅವರ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಸಹ ಸಿಗುತ್ತಿತ್ತು ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಷ್ಮಾ ಪೋಷಕರು ದೂರು ನೀಡಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಪತಿ ಪುನೀತ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಅತ್ತೆ ಕಲ್ಪನಾ ಅವರನ್ನು ವಶಕ್ಕೆ ಪಡೆಯಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಆಘಾತ ವ್ಯಕ್ತವಾಗಿದ್ದು, ಮಹಿಳೆಯರ ಮೇಲಿನ ಮನೆಯ ಒತ್ತಡಗಳು, ಕುಟುಂಬದ ಒಳಜಗಳಗಳು ಎಷ್ಟು ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಇದು ತೋರಿಸಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.





