ರಾಜಾಜಿನಗರ ಸಪ್ತ ಹತ್ಯಾಕಾಂಡ: ಕೊಲೆ ಬಳಿಕ ಚಿನ್ನಾಭರಣ ದೋಚಿದ್ದ ಇಂದುಶೇಖರ್!

Untitled design (24)

ಬೆಂಗಳೂರು ರಾಜಾಜಿನಗರದಲ್ಲಿ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಇಂದುಶೇಖರ್, ಮೃತದೇಹಗಳ ಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪತ್ನಿ, ಅತ್ತೆ ಹಾಗೂ ನಾದಿನಿಯರು ಧರಿಸಿದ್ದ ಚಿನ್ನದ ಸರ, ಕಿವಿಯೋಲೆ ಮತ್ತು ಉಂಗುರಗಳನ್ನು ಕಳವು ಮಾಡಿದ್ದ ಎನ್ನಲಾಗಿದೆ.

ರಕ್ತಸಿಕ್ತ ಒಡವೆಗಳನ್ನು ನೀರಿನಲ್ಲಿ ತೊಳೆದಿದ್ದ ಆರೋಪಿ

ಪೊಲೀಸರ ತನಿಖೆಯ ಪ್ರಕಾರ, ಹತ್ಯೆಯ ಬಳಿಕ ಮೃತದೇಹಗಳ ಮೇಲಿದ್ದ ಚಿನ್ನಾಭರಣಗಳನ್ನು ಇಂದುಶೇಖರ್ ತೆಗೆದುಕೊಂಡಿದ್ದಾನೆ. ರಕ್ತದ ಕಲೆಗಳು ಅಂಟಿದ್ದ ಒಡವೆಗಳನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಕೆಲವು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರೆ, ಇನ್ನು ಕೆಲವು ಒಡವೆಗಳನ್ನು ಗಿರವಿ ಇಟ್ಟು ಹಣ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿನ್ನ ಮಾರಿದ ಹಣದಲ್ಲಿ ಕಾರಿಗೆ ಡೀಸೆಲ್

ಒಡವೆಗಳನ್ನು ಮಾರಾಟ ಮಾಡಿ ಹಾಗೂ ಗಿರವಿ ಇಟ್ಟು ಪಡೆದ ಹಣವನ್ನು ಆರೋಪಿ ತನ್ನ ಪ್ರಯಾಣಕ್ಕೆ ಬಳಸಿಕೊಂಡಿದ್ದ ಎನ್ನಲಾಗಿದೆ. ಅದೇ ಹಣದಲ್ಲಿ ಕಾರಿಗೆ ಡೀಸೆಲ್ ಹಾಕಿಸಿಕೊಂಡು ಬೆಂಗಳೂರು, ಮಂಗಳೂರು, ಚೆನ್ನೈ ಹಾಗೂ ನಂದಿಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಂಚರಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇನ್ನು ಕೆಲವು ಚಿನ್ನಾಭರಣಗಳನ್ನು ಮಾರಾಟ ಮಾಡದೆ ತನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹತ್ಯೆಯ ಬಳಿಕವೂ ಒಡವೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಆರೋಪಿಯ ನಡೆ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಪ್ರಾಪ್ತ ಮಗಳಿಗೂ ಚಿನ್ನಾಭರಣ ನೀಡಿದ್ದನೇ?

ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಂದಿದೆ. ಆರೋಪಿ ಇಂದುಶೇಖರ್ ತನ್ನ ಅಪ್ರಾಪ್ತ ಮಗಳಿಗೂ ಕೆಲವು ಚಿನ್ನಾಭರಣಗಳನ್ನು ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ಮಗಳು, ತಂದೆ ಹೇಳಿದಂತೆ ತಾನು ಕೇಳುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

ಆದರೆ ಮಗಳಿಗೆ ಒಡವೆಗಳನ್ನು ಯಾವ ಸಂದರ್ಭದಲ್ಲಿ ನೀಡಲಾಗಿತ್ತು, ಅವುಗಳ ಬಗ್ಗೆ ಆಕೆಗೆ ಎಷ್ಟು ಮಾಹಿತಿ ಇತ್ತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹಲವು ಆಯಾಮಗಳಲ್ಲಿ ಪೊಲೀಸರ ತನಿಖೆ

ರಾಜಾಜಿನಗರದ ಏಳು ಮಂದಿಯ ಹತ್ಯೆ ಪ್ರಕರಣ ಈಗ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಹತ್ಯೆಯ ನಂತರ ಚಿನ್ನಾಭರಣಗಳ ಕಳವು, ಅವುಗಳ ಮಾರಾಟ ಮತ್ತು ಗಿರವಿ, ಆರೋಪಿಯ ಪ್ರಯಾಣ ಹಾಗೂ ಮಗಳಿಗೆ ಒಡವೆ ನೀಡಿರುವ ವಿಚಾರಗಳ ಬಗ್ಗೆ ಪೊಲೀಸರು ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ, ಏಳು ಮಂದಿಯ ಹತ್ಯೆಯ ಬಳಿಕ ಚಿನ್ನಾಭರಣಗಳನ್ನು ದೋಚಿ ಹಣ ಮಾಡಿಕೊಂಡಿದ್ದಾನೆ ಎನ್ನಲಾದ ಇಂದುಶೇಖರ್‌ನ ಕೃತ್ಯ ಪ್ರಕರಣದ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Exit mobile version