15 ದಿನಗಳಲ್ಲಿ 7 ಕೊ*ಲೆ, ಮತ್ತೆರಡು ಹತ್ಯೆಗೆ ಸ್ಕೆಚ್! ಪೊಲೀಸರನ್ನೇ ಬೆಚ್ಚಿಬೀಳಿಸಿದ ಇಂದುಶೇಖರ್!

Untitled design (17)

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಏಳು ಜನರ ಸಾಮೂಹಿಕ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿ, ಅತ್ತೆ ಸೇರಿದಂತೆ ತನ್ನದೇ ಕುಟುಂಬದ ಏಳು ಮಂದಿಯನ್ನು ಆರೋಪಿ ಇಂದುಶೇಖರ್ ಅತ್ಯಂತ ವ್ಯವಸ್ಥಿತವಾಗಿ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಕ್ಟೋಬರ್ 16ರಿಂದ ನವೆಂಬರ್ 2ರವರೆಗೆ ನಡೆದ ಸರಣಿ ಕೊಲೆಗಳ ಹಿಂದೆ ಆರೋಪಿ ರೂಪಿಸಿದ್ದ ಯೋಜನೆ, ಮೃತದೇಹಗಳನ್ನು ಸಾಗಿಸಿದ ರೀತಿ ಹಾಗೂ ಸಾಕ್ಷ್ಯಗಳನ್ನು ಮರೆಮಾಚಲು ನಡೆಸಿದ ಪ್ರಯತ್ನಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ಈ ಪ್ರಕರಣದಲ್ಲಿ ಇಂದುಶೇಖರ್‌ಗೆ ಅಪ್ರಾಪ್ತ ಮಗಳು ಸಹಕರಿಸಿದ್ದಾಳೆ ಎಂಬ ಆರೋಪವೂ ಇದೆ. ಮತ್ತೊಂದೆಡೆ, ಕೊಲೆಗಳಿಗೆ ಬಳಸಿದ್ದ ಟೊಯೊಟಾ ಇಟಿಯೊಸ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. KA 02 AF 1488 ನೋಂದಣಿ ಸಂಖ್ಯೆಯ ಈ ಕಾರಿನ ಮೇಲೆ PRESS ಎಂದು ಬರೆಸಲಾಗಿತ್ತು. ಕಾರಿನಲ್ಲಿ ದುರ್ವಾಸನೆ ಬರದಂತೆ ಇರಿಸಲು ರೋಸ್ ವಾಟರ್ ಬಾಟಲಿಗಳನ್ನು ಇಟ್ಟಿರುವುದು ಪೊಲೀಸರ ಪರಿಶೀಲನೆ ವೇಳೆ ಪತ್ತೆಯಾಗಿದೆ.

15 ದಿನಗಳಲ್ಲಿ 7 ಕೊಲೆ: ಅ. 16ರಿಂದ ಆರಂಭವಾದ ಹತ್ಯಾಕಾಂಡ

ಅಕ್ಟೋಬರ್ 16: ಪತ್ನಿ ಸುನೀತಾಳೊಂದಿಗೆ ಜಗಳವಾಡಿದ್ದ ಇಂದುಶೇಖರ್, ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಇದಕ್ಕೂ ಮುನ್ನ ನಿದ್ದೆ ಮಾತ್ರೆಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಹಗ್ಗವನ್ನು ಖರೀದಿಸಿದ್ದ. ಅಂದು ರಾತ್ರಿ ಮಾಂಸಾಹಾರ ತಯಾರಿಸಿ ಮದ್ಯ ಸೇವಿಸಿದ ಬಳಿಕ ಸುನೀತಾಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದಾನೆ. ಆಕೆ ಪ್ರಜ್ಞೆ ತಪ್ಪಿದ ನಂತರ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯನ್ನು ಕಂಡ ಅಪ್ರಾಪ್ತ ಮಗಳನ್ನು ಮನವೊಲಿಸಿ, ಆಕೆಯ ಸಹಾಯದಿಂದ ಮೃತದೇಹವನ್ನು ಚೀಲದಲ್ಲಿ ತುಂಬಿ ಬೆಡ್‌ರೂಮ್‌ನಲ್ಲಿ ಇರಿಸಿದ್ದಾನೆ.

ಅಕ್ಟೋಬರ್ 18: ಸುನೀತಾಳ ತಾಯಿ ರೂಪವತಿ ಮಗಳ ಮನೆಗೆ ಬಂದಿದ್ದರು. ಮಗಳ ಬಗ್ಗೆ ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದ ಇಂದುಶೇಖರ್, ಅತ್ತೆಗೆ ಊಟದ ವ್ಯವಸ್ಥೆ ಮಾಡಿದ್ದಾನೆ. ಈ ವೇಳೆ ಮದ್ಯ ನೀಡಿದ ಬಳಿಕ ಟಿವಿ ಸೌಂಡ್ ಹೆಚ್ಚಿಸಿ, ಹಿಂದಿನಿಂದ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ತಂದೆ-ಮಗಳು ಇಬ್ಬರೂ ಮೃತದೇಹವನ್ನು ಚೀಲದಲ್ಲಿ ಪ್ಯಾಕ್ ಮಾಡಿದ್ದಾರೆ.

ಅಕ್ಟೋಬರ್ 19: ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿಯ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ತಮಿಳುನಾಡಿನ ಸೇಲಂ ಮತ್ತು ಧರ್ಮಪುರಿ ನಡುವಿನ ಘಾಟ್ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಶಿವಕುಮಾರ್ ಕುಟುಂಬದ ಮೂವರ ಹತ್ಯೆ

ಅಕ್ಟೋಬರ್ 24: ಅಕ್ಕ ಸುನೀತಾ ಮತ್ತು ತಾಯಿ ರೂಪವತಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಶಿವಕುಮಾರ್‌ಗೆ ಇಂದುಶೇಖರ್ ಕರೆ ಮಾಡಿದ್ದಾನೆ. ಇಬ್ಬರೂ ಪ್ರವಾಸಕ್ಕೆ ಹೋಗಿದ್ದಾರೆ ಎಂದು ನಂಬಿಸಿ, ಪತ್ನಿ ದಿವ್ಯಾ ಹಾಗೂ ಮಗ ಪುನೀತ್ ಜೊತೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ್ದಾನೆ.

ರಾತ್ರಿ ದಂಪತಿಗೆ ಮಾಂಸಾಹಾರ ಹಾಗೂ ಮದ್ಯದೊಂದಿಗೆ ನಿದ್ದೆ ಮಾತ್ರೆ ನೀಡಲಾಗಿದೆ ಎನ್ನಲಾಗಿದೆ. ಶಿವಕುಮಾರ್ ಹಾಲ್‌ನಲ್ಲಿ ಮಲಗಿದ್ದಾಗ ಆತನ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಬಳಿಕ ಬೆಡ್‌ರೂಮ್‌ನಿಂದ ಹೊರಬಂದ ದಿವ್ಯಾಳನ್ನೂ ಹತ್ಯೆ ಮಾಡಲಾಗಿದೆ. ತಾಯಿಯ ಕಿರುಚಾಟ ಕೇಳಿ ಬಂದ ಬಾಲಕ ಪುನೀತ್‌ನನ್ನೂ ಕೊಲೆ ಮಾಡಲಾಗಿದೆ ಎಂಬ ಆರೋಪವಿದೆ.

ಅಕ್ಟೋಬರ್ 27: ಶಿವಕುಮಾರ್ ಮತ್ತು ದಿವ್ಯಾಳ ಮೃತದೇಹಗಳನ್ನು ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಎಸೆದಿದ್ದು, ಪುನೀತ್‌ನ ಮೃತದೇಹವನ್ನು ಬೆಂಗಳೂರಿಗೆ ವಾಪಸ್ ತಂದಿದ್ದರು ಎನ್ನಲಾಗಿದೆ.

ಶಂಕರ್, ನಳಿನಿ ಹತ್ಯೆ: ಮತ್ತೊಂದು ಕುಟುಂಬಕ್ಕೆ ಆಹ್ವಾನ

ಅಕ್ಟೋಬರ್ 31: ಅಕ್ಕ, ತಾಯಿ ಹಾಗೂ ಶಿವಕುಮಾರ್ ಕುಟುಂಬದವರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಶಂಕರ್ ಇಂದುಶೇಖರ್‌ಗೆ ಕರೆ ಮಾಡಿದ್ದಾನೆ. ಎಲ್ಲರೂ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ ಆರೋಪಿ, ಶಂಕರ್ ಹಾಗೂ ಪತ್ನಿ ನಳಿನಿಯನ್ನು ಊಟಕ್ಕೆ ಮನೆಗೆ ಆಹ್ವಾನಿಸಿದ್ದಾನೆ.

ನವೆಂಬರ್ 1: ಶಂಕರ್ ತನ್ನ ಪತ್ನಿ ನಳಿನಿ ಹಾಗೂ ಮಗ ಯತೀನ್ ಜೊತೆ ಅಕ್ಕನ ಮನೆಗೆ ಬಂದಿದ್ದಾನೆ. ರಾತ್ರಿ ದಂಪತಿಗೆ ಮಾಂಸಾಹಾರ ಮತ್ತು ಮದ್ಯದೊಂದಿಗೆ ನಿದ್ದೆ ಮಾತ್ರೆ ನೀಡಲಾಗಿದೆ. ಅವರು ನಿದ್ರೆಗೆ ಜಾರಿದ ಬಳಿಕ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ಮೃತದೇಹಗಳನ್ನು ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಲಾಗಿದೆ.

ನವೆಂಬರ್ 2: ಶಿರಾಡಿ ಘಾಟ್ ಬಳಿ ಶಂಕರ್ ಮತ್ತು ನಳಿನಿಯ ಮೃತದೇಹಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಅದೇ ದಿನ ನಂದಿ ಬೆಟ್ಟದ ಸಮೀಪ ಬಾಲಕ ಪುನೀತ್‌ನ ಮೃತದೇಹವನ್ನೂ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಬಾಲಕ ಯತೀನ್ ಕೂಡ ಆರೋಪಿಗಳ ಜೊತೆಗಿದ್ದ ಎನ್ನಲಾಗಿದೆ.

ನವೆಂಬರ್ 3ರಂದು ನಾಪತ್ತೆ ದೂರು, 4ರಂದು ಆರೋಪಿಗಳು ಲಾಕ್!

ಕುಟುಂಬದ ಏಳು ಮಂದಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಕುಟುಂಬಸ್ಥರು ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿದ್ದರು. ರಾತ್ರಿ ತಡವಾದ ಕಾರಣ ನವೆಂಬರ್ 3ರಂದು ನಳಿನಿಯ ತಾಯಿ ತುಂಗಮ್ಮ ಏಳು ಮಂದಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಮೊಬೈಲ್ ಟವರ್ ಡಂಪ್ ಪರಿಶೀಲನೆ ನಡೆಸಿದಾಗ ಆರು ಮಂದಿಯ ಮೊಬೈಲ್‌ಗಳ ನೆಟ್‌ವರ್ಕ್ ಒಂದೇ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ತನಿಖೆಗೆ ಮಹತ್ವದ ಸುಳಿವು ನೀಡಿತು. ಇದರಲ್ಲಿ ಇಂದುಶೇಖರ್ ಮೊಬೈಲ್ ಕೂಡ ಸಕ್ರಿಯವಾಗಿತ್ತು ಎನ್ನಲಾಗಿದೆ.

ನವೆಂಬರ್ 4ರಂದು ಪೊಲೀಸರು ಕಾರ್ಯಾಚರಣೆ ನಡೆಸಿ ಇಂದುಶೇಖರ್ ಹಾಗೂ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದಿದ್ದು, ಬಾಲಕ ಯತೀನ್‌ನನ್ನು ರಕ್ಷಿಸಿದ್ದಾರೆ. ವಿಚಾರಣೆ ವೇಳೆ ಏಳು ಕೊಲೆಗಳ ಹಿಂದಿನ ವಿವರಗಳು ಬಹಿರಂಗವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

14,900 ರೂ. ದಂಡ ಬಾಕಿ ಇದ್ದ ಕಾರು!

ಕೊಲೆಗಳಿಗೆ ಬಳಸಿದ್ದ KA 02 AF 1488 ನೋಂದಣಿ ಸಂಖ್ಯೆಯ ಟೊಯೊಟಾ ಇಟಿಯೊಸ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನ ಮೇಲೆ PRESS ಎಂದು ಬರೆಸಲಾಗಿತ್ತು. ನೋ ಪಾರ್ಕಿಂಗ್, ಸೀಟ್ ಬೆಲ್ಟ್ ಧರಿಸದಿರುವುದು, ಸಿಗ್ನಲ್ ಜಂಪ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗಾಗಿ ಒಟ್ಟು 14,900 ರೂ. ದಂಡ ವಿಧಿಸಿರುವುದು ಕೂಡ ಗಮನ ಸೆಳೆದಿದೆ. ಕಾರಿನಲ್ಲಿ ರೋಸ್ ವಾಟರ್ ಬಾಟಲಿಗಳು ಪತ್ತೆಯಾಗಿವೆ.

ಇನ್ನು ಬಾಲಕ ಯತೀನ್ ಸೇರಿದಂತೆ ಮತ್ತಿಬ್ಬರನ್ನು ಹತ್ಯೆ ಮಾಡಲು ಆರೋಪಿ ಯೋಜನೆ ರೂಪಿಸಿದ್ದ ಎಂಬ ಆಘಾತಕಾರಿ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸದ್ಯ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Exit mobile version