7 ಜನರ ಹತ್ಯೆ ಕೇಸ್‌; ಸೇಲಂ ಕಾಡಿನಲ್ಲಿ ಸುನೀತಾ, ರೂಪವತಿ ಮೃತದೇಹ ಪತ್ತೆ

Untitled design (18)

ಬೆಂಗಳೂರು: ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಘಾಟ್ ಪ್ರದೇಶದ ಕಾಡಿನಲ್ಲಿ ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ. ಇವು ಆರೋಪಿ ಇಂದುಶೇಖರ್‌ನ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿಯ ಮೃತದೇಹಗಳು ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದಾಗ ಆತ ಮೃತದೇಹಗಳನ್ನು ಗುರುತಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೇಲಂ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ!

ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರಿಗೆ ಸೇಲಂ ಘಾಟ್ ಪ್ರದೇಶದಲ್ಲಿ ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾಗಿರುವುದು ಮಹತ್ವದ ಸುಳಿವಾಗಿದೆ. ಮೃತದೇಹಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದವು ಎನ್ನಲಾಗಿದೆ. ಆರೋಪಿ ಇಂದುಶೇಖರ್‌ನನ್ನು ಸ್ಥಳಕ್ಕೆ ಕರೆದೊಯ್ದಾಗ ಸುನೀತಾ ಮತ್ತು ರೂಪವತಿಯ ಮೃತದೇಹಗಳನ್ನು ಗುರುತಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರನ್ನು ಸೇಲಂಗೆ ಕರೆದೊಯ್ಯಲಾಗುತ್ತಿದ್ದು, ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. 

ಮೃತದೇಹಗಳಿಗೆ 10 ಲೇಯರ್ ಟೇಪ್ ಸುತ್ತಿದ್ದ ಹಂತಕ!

ಇನ್ನು ಪೊಲೀಸರ ವಿಚಾರಣೆ ವೇಳೆ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಕೊಲೆ ಮಾಡಿದ ಬಳಿಕ ಮೃತದೇಹಗಳಿಂದ ದುರ್ವಾಸನೆ ಹೊರಬರಬಾರದು ಹಾಗೂ ಯಾರಿಗೂ ಅನುಮಾನ ಬರಬಾರದು ಎಂಬ ಉದ್ದೇಶದಿಂದ ಆರೋಪಿ ಪ್ರತಿಯೊಂದು ಮೃತದೇಹಕ್ಕೂ ಸುಮಾರು 10 ಪದರಗಳಷ್ಟು ಟೇಪ್ ಸುತ್ತುತ್ತಿದ್ದ ಎನ್ನಲಾಗಿದೆ. ಅದರ ಮೇಲೆ ಸೆಲ್ಲೋ ಟೇಪ್ ಕೂಡ ಸುತ್ತಿ ಪ್ಯಾಕ್ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ನಂದಿ ಬೆಟ್ಟದ ಬಳಿ ಪತ್ತೆಯಾಗಿದ್ದ ಬಾಲಕ ಪುನೀತ್‌ನ ಮೃತದೇಹಕ್ಕೂ ಇದೇ ರೀತಿ 10 ಲೇಯರ್ ಟೇಪ್ ಸುತ್ತಲಾಗಿತ್ತು ಎನ್ನಲಾಗಿದೆ. ಮೃತದೇಹಗಳನ್ನು ಮನೆಯಲ್ಲಿ ಇಟ್ಟಿದ್ದರೂ ವಾಸನೆ ಹೊರಬರದಂತೆ ನೋಡಿಕೊಳ್ಳಲು ಆರೋಪಿ ಈ ತಂತ್ರ ಅನುಸರಿಸಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಆರೋಪಿ ವಾಸವಿದ್ದ ಮನೆಯ ಕೆಳಭಾಗದಲ್ಲಿ ಅಂಗಡಿಗಳಿದ್ದವು. ರಾತ್ರಿ ವೇಳೆ ಮನೆಯ ಬಳಿ ಜನರ ಓಡಾಟ ಕಡಿಮೆ ಇರುತ್ತಿದ್ದ ಕಾರಣ ಯಾರಿಗೂ ಅನುಮಾನ ಬಂದಿರಲಿಲ್ಲ ಎನ್ನಲಾಗಿದೆ. ಮುಂಜಾನೆ ಸಮಯದಲ್ಲಿ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಎಂಬ ಮಾಹಿತಿ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪುನೀತ್ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು

ಈ ಪ್ರಕರಣದಲ್ಲಿ ನಂದಿ ಬೆಟ್ಟದ ಬಳಿ ಪತ್ತೆಯಾಗಿದ್ದ ಬಾಲಕ ಪುನೀತ್‌ನ ಮೃತದೇಹವನ್ನು ಕುಟುಂಬಸ್ಥರು ಬೆಂಗಳೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದೀಗ ಸೇಲಂ ಕಾಡಿನಲ್ಲಿ ಸುನೀತಾ ಮತ್ತು ರೂಪವತಿಯ ಮೃತದೇಹಗಳು ಪತ್ತೆಯಾಗಿದೆ

ತನಿಖಾಧಿಕಾರಿ ಬದಲಾವಣೆ: ಎಸಿಪಿ ಪ್ರಭಾವತಿಗೆ ಹೊಣೆ

ಏಳು ಮಂದಿಯ ಹತ್ಯೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖಾಧಿಕಾರಿಯನ್ನೂ ಬದಲಾಯಿಸಲಾಗಿದೆ. ಆರಂಭದಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣ ಅವರಿಗೆ ತನಿಖೆಯ ಜವಾಬ್ದಾರಿ ನೀಡಲಾಗಿತ್ತು. ಇದೀಗ ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಪ್ರಭಾವತಿ ಅವರನ್ನು ನೇಮಕ ಮಾಡಲಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ಮೇಲುಸ್ತುವಾರಿಯಲ್ಲಿ ತನಿಖೆ ಮುಂದುವರಿದಿದೆ. ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆ, ಮರಣೋತ್ತರ ಪರೀಕ್ಷೆ ಹಾಗೂ ಆರೋಪಿಗಳ ವಿಚಾರಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version