ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗವಾದ ಅನಿಲ್ ಕುಂಬ್ಳೆ ವೃತ್ತದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಅಪಾಯಕಾರಿಯಾಗಿ ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಕೃತ್ಯ ಎಸಗಿದ್ದು ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಖಚಿತವಾಗಿದೆ. ಪೊಲೀಸರ ವಿಚಾರಣೆಗೆ ಹಾಜರಾಗುವ ಮುನ್ನವೇ ರಿಕ್ಕಿ ರೈ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 21ರಂದು ಮುಂಜಾನೆ ಸುಮಾರು 2 ಗಂಟೆಯ ಹೊತ್ತಿಗೆ, ನಗರದ ಅನಿಲ್ ಕುಂಬ್ಳೆ ವೃತ್ತದ ಬಳಿ ಹಳದಿ ಬಣ್ಣದ ಐಷಾರಾಮಿ ಲ್ಯಾಂಬೋರ್ಗಿನಿ (KA-05 NR 0009) ಕಾರೊಂದು ಅತಿ ವೇಗವಾಗಿ ಬಂದು ವೃತ್ತದ ಸುತ್ತಲೂ ಡ್ರಿಫ್ಟಿಂಗ್ ಮಾಡಲಾರಂಭಿಸಿತ್ತು. ಜನನಿಬಿಡ ರಸ್ತೆಯಲ್ಲಿ ಟೈರ್‌ಗಳ ಕಿರುಚಾಟದೊಂದಿಗೆ ಕಾರು ಸಾಗುತ್ತಿದ್ದ ದೃಶ್ಯವನ್ನು ಅಲ್ಲಿನ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಎಚ್ಚೆತ್ತುಕೊಂಡ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಆ ಐಷಾರಾಮಿ ಕಾರು ಸದಾಶಿವನಗರದ ರಿಕ್ಕಿ ರೈ ಅವರ ನಿವಾಸದತ್ತ ಸಾಗಿರುವುದು ಪತ್ತೆಯಾಯಿತು. ಆರಂಭದಲ್ಲಿ ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬ ಬಗ್ಗೆ ಗೊಂದಲವಿತ್ತು. ಆದರೆ, ವೃತ್ತದ ಬಳಿಯಿದ್ದ ಹೈ-ರೆಸಲ್ಯೂಶನ್ ಕ್ಯಾಮೆರಾಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸ್ಟೀರಿಂಗ್ ಹಿಂದೆ ಕುಳಿತಿದ್ದ ವ್ಯಕ್ತಿ ರಿಕ್ಕಿ ರೈ ಎಂಬುದು ಸ್ಪಷ್ಟವಾಯಿತು. ಕೂಡಲೇ ಪೊಲೀಸರು ಕಾರನ್ನು ವಶಕ್ಕೆ ಪಡೆದು, ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈ ಅವರಿಗೆ ನೋಟಿಸ್ ನೀಡಿದ್ದರು.
ಪೊಲೀಸರ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ರಿಕ್ಕಿ ರೈ, ಇಂದು (ಮಾರ್ಚ್ 23) ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ, ಪೊಲೀಸ್ ಠಾಣೆಗೆ ಬರುವ ಮೊದಲೇ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ ನಿರೀಕ್ಷಿತ ಜಾಮೀನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಜಾಗರೂಕತೆ ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವ ರೀತೀಯಲ್ಲಿ ಚಾಲನೆ ಮಾಡಿದ ಆರೋಪದಡಿ ಈ ಪ್ರಕರಣ ದಾಖಲಾಗಿತ್ತು.
ಏನಿದು ಡ್ರಿಫ್ಟಿಂಗ್ ಸಾಹಸ ?
ಡ್ರಿಫ್ಟಿಂಗ್ ಎಂದರೆ ವಾಹನದ ಹಿಂದಿನ ಚಕ್ರಗಳ ಹಿಡಿತವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ, ತಿರುವುಗಳಲ್ಲಿ ನಿಯಂತ್ರಿತವಾಗಿ ಜಾರುವಂತೆ ಮಾಡುವ ಒಂದು ಚಾಲನಾ ತಂತ್ರ. ಇದು ಸಾಮಾನ್ಯವಾಗಿ ಮೋಟಾರ್‌ಸ್ಪೋರ್ಟ್ ಕ್ರೀಡೆಗಳಲ್ಲಿ ಕಂಡುಬರುತ್ತದೆ. ಆದರೆ, ನಗರದ ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವುದು ಕಾನೂನುಬಾಹಿರ ಮತ್ತು ಜೀವಕ್ಕೆ ಅಪಾಯಕಾರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ





