ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಪಂದ್ಯ ನಡೆಯುವುದು ಖಚಿತವಾಗಿದೆ. ಕಳೆದ ಕೆಲವು ದಿನಗಳಿಂದ ಇದ್ದ ಗೊಂದಲಕ್ಕೆ ತೆರೆ ಎಳೆದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA), ಮುಂಬರುವ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ ಎಂದು ಅಧಿಕೃತವಾಗಿ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್ ಪ್ರಸಾದ್ ಮಾಹಿತಿ
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಬುಧವಾರ ನಡೆಸಿದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ತಿಳಿಸಿದ್ದಾರೆ. ರಾಜ್ಯದ ಕ್ರಿಕೆಟ್ ಪ್ರೇಮಿಗಳ ಭಾವನೆ ಮತ್ತು ಸರ್ಕಾರದ ಅನುಮತಿಯನ್ನು ಗೌರವಿಸಿ ನಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಸಿದ್ಧರಿದ್ದೇವೆ. ಇದಕ್ಕೆ ಬೇಕಾದ ಎಲ್ಲಾ ಪೂರ್ವಸಿದ್ಧತೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಸುರಕ್ಷತೆಗೆ ಮೊದಲ ಆದ್ಯತೆ:
ಕಳೆದ ವರ್ಷ ಸಂಭವಿಸಿದ ಕಾಲ್ತುಳಿತದ ಅಹಿತಕರ ಘಟನೆಯನ್ನು ನೆನೆದು, ಈ ಬಾರಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಬಿಗಿ ಭದ್ರತೆ ಹಾಗೂ ಸುಧಾರಿತ ತಂತ್ರಜ್ಞಾನವನ್ನು ಬಳಸಲು ಕೆಎಸ್‌ಸಿಎ ನಿರ್ಧರಿಸಿದೆ. ಪಂದ್ಯಗಳ ಯಶಸ್ವಿ ಆಯೋಜನೆಗಾಗಿ ಬಿಬಿಎಂಪಿ (GBA/BBMP), ಬೆಸ್ಕಾಂ (BESCOM) ಮತ್ತು ಜಲಮಂಡಳಿಯೊಂದಿಗೆ (BWSSB) ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ ಎಂದು ವೆಂಕಟೇಶ್ ಪ್ರಸಾದ್ ವಿವರಿಸಿದರು.
ಸರ್ಕಾರದ ಷರತ್ತುಬದ್ಧ ಅನುಮತಿ:
ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರವು ಅಂತರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ ಆಯೋಜಿಸಲು ಕೆಎಸ್‌ಸಿಎಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ಪ್ರೇಕ್ಷಕರ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಯಾವುದೇ ಲೋಪವಾಗಬಾರದು ಎಂಬ ಕಟ್ಟುನಿಟ್ಟಿನ ಷರತ್ತನ್ನು ವಿಧಿಸಿತ್ತು. ಈ ಷರತ್ತುಗಳನ್ನು ಪಾಲಿಸಲು ಕೆಎಸ್‌ಸಿಎ ಬದ್ಧವಾಗಿದೆ.
ಆರ್‌ಸಿಬಿ ತವರಿಗೆ ಮರಳಿದ ಸಂಭ್ರಮ:
ಒಂದು ಹಂತದಲ್ಲಿ ಆರ್‌ಸಿಬಿ ಪಂದ್ಯಗಳು ಪುಣೆ ಅಥವಾ ರಾಯ್‌ಪುರಕ್ಕೆ ಸ್ಥಳಾಂತರವಾಗಲಿವೆ ಎಂಬ ವದಂತಿ ದಟ್ಟವಾಗಿತ್ತು. ಆದರೆ ಕೆಎಸ್‌ಸಿಎ ಈಗ ಅಧಿಕೃತವಾಗಿ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯುತ್ತದೆ ಅಧಿಕೃತ ಮಾಹಿತಿ ಮೇರೆಗೆ, ಆರ್‌ಸಿಬಿ ತನ್ನ ತವರು ಮೈದಾನದಲ್ಲೇ ಅಬ್ಬರಿಸಲಿದೆ.
AI ತಂತ್ರಜ್ಞಾನದ ಕ್ಯಾಮೆರಾ
ಸುರಕ್ಷತೆಯ ದೃಷ್ಟಿಯಿಂದ ಆರ್‌ಸಿಬಿ ಫ್ರಾಂಚೈಸಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸುಮಾರು 300 ರಿಂದ 350 ಎಐ (Artificial Intelligence) ಆಧಾರಿತ ಕ್ಯಾಮೆರಾಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಅಳವಡಿಸಲು ಆರ್‌ಸಿಬಿ ಆಡಳಿತ ನಿರ್ಧರಿಸಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ಪ್ರೇಕ್ಷಕರ ಚಲನವಲನಗಳನ್ನು ಗಮನಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಹಕಾರಿಯಾಗಲಿದೆ.





