ಬೆಂಗಳೂರು: 2025ರ ಜೂನ್ 4ರಂದು ಆರ್‌ಸಿಬಿ ತಂಡದ ಚೊಚ್ಚಲ ಐಪಿಎಲ್ ಪ್ರಶಸ್ತಿ ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಗೌರವ ಸಲ್ಲಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜಂಟಿಯಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿವೆ.
ಶಾಶ್ವತವಾಗಿ ಕಾಯ್ದಿರಿಸಿದ 11 ಆಸನಗಳು
ಈ ಬಾರಿಯ ಐಪಿಎಲ್ ಸರಣಿಯುದ್ದಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣದ ನಿರ್ದಿಷ್ಟ ಗ್ಯಾಲರಿಯಲ್ಲಿ 11 ಆಸನಗಳನ್ನು ಶಾಶ್ವತವಾಗಿ ಖಾಲಿ ಬಿಡಲು ತೀರ್ಮಾನಿಸಲಾಗಿದೆ. ಈ ಆಸನಗಳನ್ನು ಯಾವುದೇ ಪಂದ್ಯಕ್ಕೂ ಮಾರಾಟ ಮಾಡಲಾಗುವುದಿಲ್ಲ. ಇದು ಕೇವಲ ಆಸನಗಳಲ್ಲ, ಆರ್‌ಸಿಬಿ ಕುಟುಂಬದ ಅವಿಭಾಜ್ಯ ಅಂಗವಾಗಿದ್ದ ಅಭಿಮಾನಿಗಳ ನೆನಪಿನ ಸಂಕೇತ.
ದುರಂತ ಸಂಭವಿಸಿದ ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ವಿಶೇಷ ‘ಮೆಮೊರಿಯಲ್ ಪ್ಲಾಕ್’ (ಸ್ಮಾರಕ ಫಲಕ) ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಮೃತರ ಹೆಸರುಗಳನ್ನು ಕೆತ್ತಲಾಗುವುದು. ಅಷ್ಟೇ ಅಲ್ಲದೆ, 2026ರ ಐಪಿಎಲ್ ಸೀಸನ್‌ನ ಮೊದಲ ಪಂದ್ಯ ಆರಂಭವಾಗುವ ಮುನ್ನ ಮೃತರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ನಡೆಸಲಾಗುವುದು. ಕ್ರೀಡಾಂಗಣದ ಬೃಹತ್ ಪರದೆಯ ಮೇಲೆ ಮೃತರ ಭಾವಚಿತ್ರಗಳನ್ನು ಪ್ರದರ್ಶಿಸಿ ಗೌರವ ಸಲ್ಲಿಸಲಾಗುತ್ತದೆ. ಈ ಭಾವುಕ ಕ್ಷಣದಲ್ಲಿ ಎದುರಾಳಿ ತಂಡದ ಆಟಗಾರರು ಕೂಡ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಅಂದು 17 ವರ್ಷಗಳ ಕಾಯುವಿಕೆಯ ನಂತರ ಆರ್‌ಸಿಬಿ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದ ನಗರಗಳಿಂದ ಅಭಿಮಾನಿಗಳು ಬಂದಿದ್ದರು. ವಿಜಯೋತ್ಸವದ ಮೆರವಣಿಗೆಯನ್ನು ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಲಕ್ಷಾಂತರ ಜನ ಜಮಾಯಿಸಿದ್ದರು. ಜನರ ಸಂಖ್ಯೆ ಮಿತಿಮೀರಿದ ಕಾರಣ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯದಿಂದಾಗಿ ಕಾಲ್ತುಳಿತ ಸಂಭವಿಸಿತ್ತು. ಬೆಂಗಳೂರು ಮತ್ತು ತುಮಕೂರು ಮೂಲದ ಯುವಕರು ಈ ದುರಂತದಲ್ಲಿ ಸಾವನ್ನಪ್ಪಿದ್ದರು. ಸಂಭ್ರಮಿಸಬೇಕಾದ ಕ್ಷಣಗಳು ಕ್ಷಣಾರ್ಧದಲ್ಲಿ ಶೋಕಸಾಗರವಾಗಿ ಬೇರ್ಪಟ್ಟಿತ್ತು.
ಸುರಕ್ಷತೆಗೆ ಆದ್ಯತೆ
ಕಳೆದ ವರ್ಷದ ಕಹಿ ಘಟನೆಯಿಂದ ಪಾಠ ಕಲಿತಿರುವ ಕೆಎಸ್‌ಸಿಎ, ಈ ಬಾರಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಕ್ರೀಡಾಂಗಣದ ಸುತ್ತಮುತ್ತ ಜನದಟ್ಟಣೆ ನಿಯಂತ್ರಿಸಲು ಸುಧಾರಿತ ತಂತ್ರಜ್ಞಾನ ಮತ್ತು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಆರ್‌ಸಿಬಿ ಅಭಿಮಾನಿಗಳ ಜೀವಕ್ಕೆ ಬೆಲೆ ಕಟ್ಟಲಾಗದು ಎಂಬ ಸಂದೇಶವನ್ನು ಈ ಮೂಲಕ ಸಂಸ್ಥೆ ಸಾರುತ್ತಿದೆ.





