ಬೆಂಗಳೂರು: ಬೆಂಗಳೂರು ಮೂಲದ ಕಂಪನಿಯೊಂದರಿಂದ 3 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ರಕ್ಷಣಾ ಉತ್ಪಾದನಾ ಇಲಾಖೆಯ ಉಪ ಯೋಜನಾ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ದೀಪಕ್ ಕುಮಾರ್ ಶರ್ಮಾ ಅವರನ್ನು ಸಿಬಿಐ (CBI) ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಧೆಡೆ ದಾಳಿ ನಡೆಸಿರುವ ಅಧಿಕಾರಿಗಳು ಬರೋಬ್ಬರಿ 2.36 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ದೀಪಕ್ ಕುಮಾರ್ ಶರ್ಮಾ ಅವರು ರಕ್ಷಣಾ ಉತ್ಪನ್ನಗಳ ಉತ್ಪಾದನೆ ಮತ್ತು ರಫ್ತು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಖಾಸಗಿ ಕಂಪನಿಗಳಿಗೆ ರಕ್ಷಣಾ ಇಲಾಖೆಯ ಕೆಲಸಗಳಲ್ಲಿ ಅನಗತ್ಯ ಅನುಕೂಲ ಮಾಡಿಕೊಡುವ ಸಲುವಾಗಿ ಅವರು ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬೆಂಗಳೂರು ಮೂಲದ ರಾಜೀವ್ ಯಾದವ್ ಸಿಂಗ್ ಮತ್ತು ರವೀಜ್ ಸಿಂಗ್ ಎಂಬುವವರ ಒಡೆತನದ ಕಂಪನಿಯ ವ್ಯವಹಾರಗಳಿಗೆ ನೆರವಾಗಲು ಶರ್ಮಾ ಪಿತೂರಿ ನಡೆಸಿದ್ದರು. ಡಿಸೆಂಬರ್ 18ರಂದು ವಿನೋದ್ ಕುಮಾರ್ ಎಂಬಾತನ ಮೂಲಕ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಈ ಭ್ರಷ್ಟಾಚಾರದ ಜಾಲದಲ್ಲಿ ದೀಪಕ್ ಕುಮಾರ್ ಶರ್ಮಾ ಮಾತ್ರವಲ್ಲದೆ ಅವರ ಪತ್ನಿ, ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಿಯೋಜಿತರಾಗಿರುವ ಕರ್ನಲ್ ಕಾಜಲ್ ಬಾಲಿ ಅವರ ಹೆಸರೂ ಕೇಳಿಬಂದಿದೆ. ಡಿಸೆಂಬರ್ 19 ರಂದು ಇಬ್ಬರ ವಿರುದ್ಧವೂ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿನೋದ್ ಕುಮಾರ್ ಎಂಬ ಮಧ್ಯವರ್ತಿಯನ್ನೂ ಸಿಬಿಐ ಬಂಧಿಸಿದೆ.
ಲಂಚದ ಹಣ ಕೈಬದಲಾಗುತ್ತಿದ್ದ ಮಾಹಿತಿ ಸಿಗುತ್ತಿದ್ದಂತೆಯೇ ಅಲರ್ಟ್ ಆದ ಸಿಬಿಐ, ಬೆಂಗಳೂರಿನ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ರಾಜೀವ್ ಯಾದವ್ ಮತ್ತು ರವಜಿತ್ ಸಿಂಗ್ ಅವರಿಗೆ ಸೇರಿದ ಕಚೇರಿ ಹಾಗೂ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಇಬ್ಬರೂ ಅಧಿಕಾರಿ ಶರ್ಮಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಿಯಮಬಾಹಿರವಾಗಿ ಸರ್ಕಾರದ ಅನುಮೋದನೆಗಳನ್ನು ಪಡೆಯಲು ಯತ್ನಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದಾಳಿಯ ವೇಳೆ ಸಿಬಿಐ ಅಧಿಕಾರಿಗಳಿಗೆ ದೆಹಲಿಯ ಶರ್ಮಾ ನಿವಾಸದಲ್ಲಿ 2.23 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಲಂಚವಾಗಿ ಪಡೆದಿದ್ದ 3 ಲಕ್ಷ ರೂಪಾಯಿಯನ್ನು ಅಲ್ಲಿಯೇ ವಶಪಡಿಸಿಕೊಳ್ಳಲಾಗಿದೆ. ಇತ್ತ ರಾಜಸ್ಥಾನದಲ್ಲಿರುವ ಅವರ ಪತ್ನಿ ಕರ್ನಲ್ ಕಾಜಲ್ ಬಾಲಿ ಅವರ ನಿವಾಸದ ಮೇಲೆ ದಾಳಿ ಮಾಡಿದಾಗ ಅಲ್ಲಿಯೂ 10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಒಟ್ಟಾರೆಯಾಗಿ ಈ ದಂಪತಿಗಳ ಬಳಿ ಇದ್ದ 2.36 ಕೋಟಿ ರೂಪಾಯಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬಂಧಿತರಾದ ದೀಪಕ್ ಕುಮಾರ್ ಶರ್ಮಾ ಮತ್ತು ವಿನೋದ್ ಕುಮಾರ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಡಿಸೆಂಬರ್ 23ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಈ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಮತ್ತು ಯಾವೆಲ್ಲಾ ಖಾಸಗಿ ಕಂಪನಿಗಳು ಇವರ ಸಂಪರ್ಕದಲ್ಲಿದ್ದವು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
