ಬೆಂಗಳೂರಿನಲ್ಲಿ ವಕೀಲನ ತಲೆಗೆ ಗುಂಡಿಟ್ಟು ಬರ್ಬರ ಹ*ತ್ಯೆ

ನವರಾತ್ರಿ 9ನೇ ದಿನ (3)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿನ ದಾಳಿಗೆ ವಕೀಲರೊಬ್ಬರು ಬಲಿಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ವಕೀಲ ಮಂಜುನಾಥ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮೃತ ವಕೀಲ ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಬಿಹಾರ ಮೂಲದ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಬಾಡಿಗೆ ಹಣದ ವಿಚಾರವಾಗಿ ಗಲಾಟೆ ನಡೆದಿತ್ತೇ ಎಂಬ ಅನುಮಾನವೂ ಮೂಡಿದೆ. ಆದರೆ, ಹತ್ಯೆಯ ಹಿಂದಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಬಾಡಿಗೆ ಹಣದ ನೆಪದಲ್ಲಿ ಮನೆಯಿಂದ ಹೊರಗೆ ಕರೆಸಿದ್ರಾ?

ಮಾಹಿತಿಯ ಪ್ರಕಾರ, ಭಾನುವಾರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಪಟ್ಟಂದೂರು ಅಗ್ರಹಾರದಲ್ಲಿರುವ ತಮ್ಮ ಮನೆಯಲ್ಲಿ ವಕೀಲ ಮಂಜುನಾಥ್ ಮತ್ತು ಅವರ ಪತ್ನಿ ಇದ್ದರು. ಈ ಸಂದರ್ಭದಲ್ಲಿ ಮಂಜುನಾಥ್ ಅವರಿಗೆ ಯಾರೋ ಫೋನ್ ಕರೆ ಮಾಡಿ ಬಾಡಿಗೆ ಹಣ ನೀಡುವ ವಿಚಾರವಾಗಿ ಮಾತನಾಡಲು ಮನೆಯ ಹೊರಗೆ ಬರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಫೋನ್ ಕರೆ ಬಂದ ಹಿನ್ನೆಲೆ ಮಂಜುನಾಥ್ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಹಣ ನೀಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಮಂಜುನಾಥ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹಠಾತ್ತನೆ ನಡೆದ ಗುಂಡಿನ ದಾಳಿಯಿಂದ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮಣಿಪಾಲ್ ಆಸ್ಪತ್ರೆಗೆ ಸಾಗಿಸಿದರೂ ಉಳಿಯದ ಜೀವ

ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮನೆಯಿಂದ ಹೊರಗೆ ಬಂದ ಕೆಲವೇ ಕ್ಷಣಗಳಲ್ಲಿ ನಡೆದ ಗುಂಡಿನ ದಾಳಿ ವಕೀಲರ ಜೀವವನ್ನೇ ಬಲಿ ಪಡೆದಿದೆ. ಮನೆಯ ಸಮೀಪವೇ ಈ ಘಟನೆ ನಡೆದಿರುವುದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನೆಯ ಸಮಯದಲ್ಲಿ ಮಂಜುನಾಥ್ ಅವರ ಪತ್ನಿ ಮನೆಯಲ್ಲಿದ್ದರು ಎನ್ನಲಾಗಿದೆ.

ಬಾಡಿಗೆದಾರರ ಮೇಲೆಯೇ ಅನುಮಾನದ ಕಣ್ಣು

ಮೃತ ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಬಿಹಾರ ಮೂಲದ ವ್ಯಕ್ತಿಗಳ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಡಿಗೆ ಹಣದ ವಿಚಾರವಾಗಿ ಯಾವುದಾದರೂ ವಿವಾದವಿತ್ತೇ, ಈ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತೇ ಎಂಬುದರ ಕುರಿತು ತನಿಖೆ ನಡೆಯಬೇಕಿದೆ.

ಆರೋಪಿಗಳ ಗುರುತು, ಕೃತ್ಯದಲ್ಲಿ ಭಾಗಿಯಾಗಿರುವವರ ಸಂಖ್ಯೆ ಮತ್ತು ಹತ್ಯೆಗೆ ಬಳಸಿದ ಆಯುಧದ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

ವೈಟ್‌ಫೀಲ್ಡ್ ಪೊಲೀಸರಿಂದ ತನಿಖೆ ಚುರುಕು

ಘಟನೆಗೆ ಸಂಬಂಧಿಸಿದಂತೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹತ್ಯೆಯ ಹಿಂದಿನ ಕಾರಣವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

 

Exit mobile version