ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲದ ಬಾಡಿಗೆ ಮನೆಯಲ್ಲಿ ಇಂದು (ಜುಲೈ 15) ಬೆಳಗ್ಗೆ 8:30 ರ ಸುಮಾರಿಗೆ ಹೃದಯಾಘಾತದಿಂದ ಸರ್ಕಾರಿ ನೌಕರ ಸತೀಶ್ (46) ಮೃತಪಟ್ಟಿದ್ದಾರೆ. ಹಾಸನ ಮೂಲದ ಸತೀಶ್, ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸತೀಶ್ ಬೆಳಗ್ಗೆ ಸ್ನಾನ ಮಾಡಿ ಬಂದ ನಂತರ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆತನ ಪತ್ನಿ ಜಯಶ್ರೀ ಅವರು ಸತೀಶ್‌ರನ್ನು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ವೈದ್ಯರು ಆತನನ್ನು ಪರೀಕ್ಷಿಸಿದಾಗ ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಈ ದುರಂತ ಘಟನೆಯಿಂದ ಸತೀಶ್‌ರ ಕುಟುಂಬದವರು ಮತ್ತು ಸಹೋದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ.
ಸತೀಶ್ ತಮ್ಮ ಕರ್ತವ್ಯದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದವರಾಗಿದ್ದು, ಸ್ಥಳೀಯ ಆಡಳಿತದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಈ ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.