ಬೆಳಗಾವಿಯಲ್ಲಿ ನಕಲಿ ಪತ್ರಕರ್ತ ಕಿರಾತಕರ ಮತ್ತೊಂದು ಭಯಾನಕ ಬ್ಲ್ಯಾಕ್‌ಮೇಲ್ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯ ಮನೆಯಲ್ಲಿ ವಿದ್ಯುತ್ ಬಲ್ಬ್ ಹೋಲ್ಡರ್‌ನೊಳಗೆ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದು, ನೂರಕ್ಕೂ ಹೆಚ್ಚು ನಗ್ನ ವಿಡಿಯೋಗಳನ್ನು ಬಳಸಿ ಲಕ್ಷ ಲಕ್ಷ ರೂಪಾಯಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪವಾಗಿದೆ.
ಪ್ರಕರಣದ ವಿವರಗಳು :
- ಆರೋಪಿಗಳು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ್ದರು.
- ಆರೋಪಿಗಳ ಮೊಬೈಲ್ ರಿಸ್ಟೋರ್ ಮಾಡಿದಾಗ ನೂರಕ್ಕೂ ಹೆಚ್ಚು ನಗ್ನ ವಿಡಿಯೋಗಳು ಪತ್ತೆಯಾಗಿವೆ.
- “ಕೇಳಿದಷ್ಟು ಹಣ ಕೊಡದಿದ್ದರೆ ವಿಡಿಯೋಗಳನ್ನು ವೈರಲ್ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ.
- ಅಧಿಕಾರಿ ಬೆದರಿಕೆಗೆ ಒಳಗಾಗಿ ಹಲವು ಬಾರಿ ಲಕ್ಷ ಲಕ್ಷ ರೂಪಾಯಿ ನೀಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತ ಆರೋಪಿಗಳು ಸಮೀರ್ ಶೇಖ್, ಅಬ್ದುಲ್‌ರಶೀದ್ ಮಕಾಂದಾರ್, ಮೊಹ್ಮದ್ ಬಾಳೇಕುಂದ್ರಿ ಈ ಮೂವರು ಆರೋಪಿಗಳನ್ನು ಮಾಳಮಾರುತಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದು, ಮಹಿಳಾ ಅಧಿಕಾರಿಯ ಮನೆಗೂ ನುಗ್ಗಿ ಖಾಸಗಿ ವಿಡಿಯೋ ಸೆರೆಹಿಡಿದ್ದರು ಎಂದು ತಿಳಿದುಬಂದಿದೆ. ಆ ಮಹಿಳಾ ಅಧಿಕಾರಿಯಿಂದ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ತನಿಖೆ ಚುರುಕಾಗುತ್ತಿದ್ದಂತೆ ಇನ್ನೊಬ್ಬ ಅಧಿಕಾರಿಗೂ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿರುವುದು ದೃಢವಾಗಿದೆ. ಪೊಲೀಸರು ಆರೋಪಿಗಳ ಮೊಬೈಲ್‌ಗಳು, ಕ್ಯಾಮೆರಾ ಸಾಧನಗಳು ಮತ್ತು ಇತರ ಆಧಾರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಇರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.
ಈ ಘಟನೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಆತಂಕ ವ್ಯಕ್ತವಾಗಿದ್ದು, ಅಧಿಕಾರಿಗಳ ಮನೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ.





