ಸಂಬಳ ವಿಳಂಬಕ್ಕೆ ಬೇಸತ್ತು ಆಂಬುಲೆನ್ಸ್ ಚಾಲಕ ಆತ್ಮಹತ್ಯೆ

Shn (23)

ಖಾಸಗಿ ಆಸ್ಪತ್ರೆಯಿಂದ ಸಂಬಳ ವಿಳಂಬಕ್ಕೆ ಮನನೊಂದ ಆಂಬುಲೆನ್ಸ್ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓಂಕಾರ ಪವಾರ್ (25) ಎಂಬ ಯುವಕ ಈ ದುರ್ದೈವಿಯಾಗಿದ್ದಾನೆ. ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಡೆತ್‌ನೋಟ್ ಬರೆದಿಟ್ಟು, ಓಂಕಾರ ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾನೆ.

ಓಂಕಾರ ಪವಾರ್ ಬೆಳಗಾವಿ ನಗರದ ಸೇಂಟ್ರಾ ಎಂಬ ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ತಿಂಗಳಿಂದ ಆಸ್ಪತ್ರೆ ಆಡಳಿತವು ಆತನಿಗೆ ಸಂಬಳವನ್ನೇ ನೀಡಿರಲಿಲ್ಲ. ಸಂಬಳಕ್ಕಾಗಿ ಆತ ಹಲವು ಬಾರಿ ಮನವಿ ಮಾಡಿದರೂ, ಆಡಳಿತ ಮಂಡಳಿಯಿಂದ ಸೂಕ್ತ ಪ್ರತಿಕ್ರಿಯೆ ದೊರಕಿರಲಿಲ್ಲ. ಡೆತ್‌ನೋಟ್ ಬರೆದು, ಶಹಾಪುರದ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಓಂಕಾರನಿಗೆ, ಒಂದು ವರ್ಷದ ಮಗುವಿದೆ. ಕುಟುಂಬಸ್ಥರು ಮತ್ತು ಚಾಲಕರ ಸಂಘಟನೆಯ ಮುಖಂಡರು ಸೇಂಟ್ರಾ ಆಸ್ಪತ್ರೆಯ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಆಸ್ಪತ್ರೆಯ ನಿರ್ಲಕ್ಷ್ಯವೇ ಓಂಕಾರನ ಸಾವಿಗೆ ಕಾರಣ,” ಎಂದು ಕುಟುಂಬದವರು ಆರೋಪಿಸಿದ್ದಾರೆ.

ಶಹಾಪುರ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

Exit mobile version