ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ಇಡೀ ನಗರವೇ ಬೆಚ್ಚಿಬೀಳುವಂತಿದೆ. ಪ್ರೀತಿಯ ಹೆಸರಿನಲ್ಲಿ ನಂಬಿಸಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಏನಿದು ಘಟನೆ?
ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರದ ವಿಲ್ಲಾವೊಂದರಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ಯುವತಿಯು ಡಿಕ್ಸಿನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಪ್ರೇಮಿಗಳ ದಿನದಂದೇ (ಫೆಬ್ರವರಿ 14) ಪ್ರಿಯಕರ ಡಿಕ್ಸಿನ್ ಆಕೆಯನ್ನು ಸರ್ಜಾಪುರದ ವಿಲ್ಲಾಗೆ ಕರೆದೊಯ್ದಿದ್ದಾನೆ. ಅಲ್ಲಿ ಪ್ರಿಯಕರ ಡಿಕ್ಸಿನ್ ಮತ್ತು ಆತನ ಸ್ನೇಹಿತ ನಿಖಿಲ್ ಸೇರಿ ವಿದ್ಯಾರ್ಥಿನಿಗೆ ನಶೆ ಬರುವ ಮಾತ್ರೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಕಷ್ಟಕ್ಕೆ ದೂಡಿದ ಪ್ರೀತಿ:
ಯುವತಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ನಿಖಿಲ್ ಮತ್ತು ಡಿಕ್ಸಿನ್ ಇಬ್ಬರೂ ಸೇರಿ ಅತ್ಯಾಚಾರ ಎಸಗಿದ್ದಾರೆ. ಅಷ್ಟಕ್ಕೇ ನಿಲ್ಲದ ಕಾಮುಕರು, ಈ ನೀಚ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಈ ವಿಡಿಯೋ ತೋರಿಸಿ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ದೂರು ದಾಖಲಾಗಿದೆ.
ಆರೋಪಿಗಳ ಹಿನ್ನೆಲೆ ನಿಖಿಲ್ ಆತನು ಸಕಲೇಶಪುರ ಮೂಲದವನು. ಡಿಕ್ಸಿನ್ ಪಶ್ಚಿಮ ಬಂಗಾಳ ಮೂಲದವನು.
ಸದ್ಯ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ಪೋಷಕರಲ್ಲಿ ಮತ್ತು ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿವೆ.