ಕಾಡಾನೆ ಓಡಿಸುವಾಗ ಅರಣ್ಯ ಇಲಾಖೆಯ ಎಡವಟ್ಟು: ಫೈರಿಂಗ್‌ ವೇಳೆ ಸ್ಕೂಟರ್ ಸವಾರನಿಗೆ ಗಾಯ

Untitled design 2026 08 21T192241.101

ಮಂಗಳೂರು/ಸುಳ್ಯ ಆ. 21: ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ನಡೆಸಿದ ಫೈರಿಂಗ್‌ನಿಂದ ಸ್ಕೂಟರ್ ಸವಾರನೊಬ್ಬ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೇಂಗಮಲೆಯಲ್ಲಿ ನಡೆದಿದೆ. ಗಾಳಿಯಲ್ಲಿ ಹಾರಿಸಿದ ಗುಂಡಿನ ಚಿಲ್ ತಾಗಿ ಬ್ಯಾಂಕ್ ಉದ್ಯೋಗಿ ರಾಘವ ಪ್ರಭು ಅವರ ಎಡಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆ.12 ರಂದು ಸಂಜೆ ಕೆಲಸ ಮುಗಿಸಿ ರಾಘವ ಪ್ರಭು ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೇಂಗಮಲೆ ಬಳಿ ರಸ್ತೆ ದಾಟುತ್ತಿದ್ದ ಕಾಡಾನೆ ಕಾಣಿಸಿಕೊಂಡಿದೆ. ಆನೆಯನ್ನು ಕಂಡು ಆತಂಕಗೊಂಡ ರಾಘವ ಸ್ಕೂಟರ್ ತಿರುಗಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಪುತ್ತೂರು ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಯನ್ನು ಕಾಡಿನೊಳಗೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದ್ದರು. ಆನೆಯನ್ನು ಹೆದರಿಸಿ ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಗುಂಡಿನ ಚಿಲ್ ಸ್ಕೂಟರ್ ಸವಾರನ ಎಡಕಾಲಿಗೆ ತಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ.

ಗಾಯ ತೋರಿಸಿದರೂ ನಿರ್ಲಕ್ಷ್ಯ?

ಘಟನೆಯ ಬಳಿಕ ರಾಘವ ಅವರು ತಮ್ಮ ಕಾಲಿಗೆ ಗಾಯವಾಗಿರುವುದನ್ನು ಅರಣ್ಯ ಸಿಬ್ಬಂದಿಗೆ ತೋರಿಸಿದ್ದಾರೆ. ಆದರೆ, “ಏನೂ ಆಗುವುದಿಲ್ಲ, ಮನೆಗೆ ಹೋಗಿ” ಎಂದು ಸಿಬ್ಬಂದಿ ಹೇಳಿದ್ದಾಗಿ ಅವರು ಆರೋಪಿಸಿದ್ದಾರೆ.

ಮರುದಿನ ಕಾಲಿನ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ರಾಘವ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರಿಶೀಲಿಸಿದಾಗ ಕಾಲಿನಲ್ಲಿ ಗುಂಡಿನ ಚಿಲ್ ಇರುವುದು ಪತ್ತೆಯಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಕಾಲಿನಲ್ಲಿದ್ದ ಚಿಲ್ ಅನ್ನು ಹೊರತೆಗೆಯಲಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕಿತ್ತು

ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ವಿರುದ್ಧ ರಾಘವ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ಫೈರಿಂಗ್ ನಡೆಸುವ ಮೊದಲು ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕಿತ್ತು. ರಸ್ತೆಯ ಎರಡೂ ಬದಿಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದರೆ ಇಂತಹ ಘಟನೆ ತಪ್ಪಿಸಬಹುದಿತ್ತು ಎಂಬುದು ಅವರ ಅಭಿಪ್ರಾಯವಾಗಿದೆ.

ಅರಣ್ಯ ಇಲಾಖೆಯ ಸ್ಪಷ್ಟನೆ ಏನು?

ಘಟನೆ ಕುರಿತು ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕಾಡಾನೆಯನ್ನು ಕಾಡಿನೊಳಗೆ ಓಡಿಸುವ ವೇಳೆ ಆಕಸ್ಮಿಕವಾಗಿ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಫೈರಿಂಗ್ ಮಾಡಿದ ಗುಂಡಿನ ಚಿಲ್ ರಿಬೌಂಡ್ ಆಗಿ ಸ್ಕೂಟರ್ ಸವಾರನಿಗೆ ತಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಂಗಮಲೆಯಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ನಡೆದ ಈ ಅವಾಂತರ ಸಾರ್ವಜನಿಕರ ಸುರಕ್ಷತೆ ಹಾಗೂ ವನ್ಯಜೀವಿ ಕಾರ್ಯಾಚರಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Exit mobile version