ಬೆಂಗಳೂರಿಗರೇ ನಕಲಿ ಕ್ಲಿನಿಕ್‌ಗೆ ಹೋಗೋ ಮುನ್ನ ಎಚ್ಚರ ಎಚ್ಚರ..!

Web (12)

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಅನಧಿಕೃತ ಕ್ಲಿನಿಕ್‌ಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರ ಜೀವದೊಂದಿಗೆ ಚೆಲ್ಲಾಟವಾಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಹೆಗ್ಗನಹಳ್ಳಿ ಕ್ರಾಸ್‌ನ ಮೋಹನ್ ಚಿತ್ರಮಂದಿರದ ಬಳಿಯಿರುವ ಶ್ರೀ ಸಿದ್ದಿ ವಿನಾಯಕ ಕ್ಲಿನಿಕ್‌ನಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಈ ಕ್ಲಿನಿಕ್‌ನಲ್ಲಿ ಆಯುರ್ವೇದ ಓದಿದ್ದ ವೈದ್ಯ ಪ್ರದೀಪ್ ಕುಮಾರ್, KPME (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ) ಅನುಮತಿಯಿಲ್ಲದೇ ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಆಘಾತಕಾರಿ ಸತ್ಯ ಬಯಲಾಗಿದೆ.

ಅಕ್ಟೋಬರ್ 14, 2025 ರಂದು, ಜ್ವರದಿಂದ ಬಳಲುತ್ತಿದ್ದ ಸರಸ್ವತಿ ಎಂಬ ಮಹಿಳೆ ಶ್ರೀ ಸಿದ್ದಿ ವಿನಾಯಕ ಕ್ಲಿನಿಕ್‌ಗೆ ತೆರಳಿದ್ದರು. ವೈದ್ಯ ಪ್ರದೀಪ್ ಕುಮಾರ್ ಅವರು ಸರಸ್ವತಿಯವರ ಬಲಗಾಲಿಗೆ ಇಂಜೆಕ್ಷನ್ ನೀಡಿ, ಕೆಲವು ಮಾತ್ರೆಗಳನ್ನು ಕೊಟ್ಟು ಕಳುಹಿಸಿದ್ದರು. ಆದರೆ, ಇಂಜೆಕ್ಷನ್‌ನಿಂದಾಗಿ ಸರಸ್ವತಿಯವರ ಕಾಲಿನಲ್ಲಿ ಊತ ಕಾಣಿಸಿಕೊಂಡಿತು. ಮಾತ್ರೆ ಸೇವಿಸಿದ ಬಳಿಕ ವಾಂತಿಯಾಗಿ, ಆರೋಗ್ಯ ಇನ್ನಷ್ಟು ಹದಗೆಟ್ಟಿತು.
ಸಂಜೆಯೇ ಮತ್ತೆ ಕ್ಲಿನಿಕ್‌ಗೆ ತೆರಳಿ ವಿಷಯವನ್ನು ವೈದ್ಯರಿಗೆ ತಿಳಿಸಿದಾಗ, ಡಾ. ಪ್ರದೀಪ್ ತಾನೇ ತಪ್ಪು ಮಾಡಿರುವುದನ್ನು ಒಪ್ಪಿಕೊಂಡು, “ಬೇರೆ ಕ್ಲಿನಿಕ್‌ಗೆ ಹೋಗಿ” ಎಂದು ಸಲಹೆ ನೀಡಿದ್ದಾರೆ. ಆದರೆ, ಸರಸ್ವತಿಯವರು ಒಪ್ಪದಿದ್ದಾಗ, ರಾತ್ರಿ 9 ಗಂಟೆವರೆಗೂ ಅವರನ್ನು ಕ್ಲಿನಿಕ್‌ನಲ್ಲೇ ಇರಿಸಿಕೊಂಡಿದ್ದರು. ಕೊನೆಗೆ, ತಾನೇ ಆಂಬುಲೆನ್ಸ್ ಕರೆದು ಸರಸ್ವತಿಯವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕಳುಹಿಸಿದ್ದರು. ತಡರಾತ್ರಿಯವರೆಗೂ ಚಿಕಿತ್ಸೆ ಪಡೆದ ಸರಸ್ವತಿಯವರು, ಮರುದಿನ ಕ್ಲಿನಿಕ್‌ಗೆ ತೆರಳಿದಾಗ ವೈದ್ಯ ಪ್ರದೀಪ್ ಹೈಡ್ರಾಮಾ ಮಾಡಿದ್ದಾರೆ.

ಸರಸ್ವತಿಯವರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದರು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ವೈದ್ಯ ಪ್ರದೀಪ್ ಕುಮಾರ್‌ನನ್ನು ವಶಕ್ಕೆ ಪಡೆದು, ಶ್ರೀ ಸಿದ್ದಿ ವಿನಾಯಕ ಕ್ಲಿನಿಕ್‌ನ ಶಟರ್ ಡೌನ್ ಮಾಡಿದರು. KPME ಅನುಮತಿಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಈ ಕ್ಲಿನಿಕ್, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿತ್ತು ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ.

ಬೆಂಗಳೂರಿನಲ್ಲಿ ಅನಧಿಕೃತ ಕ್ಲಿನಿಕ್‌ಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಕೆಲವರು ಆಯುರ್ವೇದ, ಹೋಮಿಯೋಪತಿ ಓದಿದ್ದರೂ, ಅಲೋಪತಿಯ ಚಿಕಿತ್ಸೆ ನೀಡುವ ಮೂಲಕ ಜನರ ಜೀವಕ್ಕೆ ಕಂಟಕ ತಂದೊಡ್ಡುತ್ತಿದ್ದಾರೆ. ಇಂತಹ ಕ್ಲಿನಿಕ್‌ಗಳಿಗೆ ಭೇಟಿ ನೀಡುವ ಮುನ್ನ ಎಚ್ಚರಿಕೆ.

ಈ ಘಟನೆಯಿಂದ ಸ್ಪಷ್ಟವಾಗಿರುವುದು ಏನೆಂದರೆ, ಬೆಂಗಳೂರಿನಂತಹ ಮಹಾನಗರದಲ್ಲೂ ಜನರ ಆರೋಗ್ಯದೊಂದಿಗೆ ಆಟವಾಡುವ ಅನಧಿಕೃತ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ಜನರು ಎಚ್ಚರಿಕೆಯಿಂದಿರಬೇಕು ಮತ್ತು ಯಾವುದೇ ಚಿಕಿತ್ಸೆಗೆ ಮುನ್ನ KPME ರಿಜಿಸ್ಟ್ರೇಷನ್‌ನಂತಹ ಮೂಲಭೂತ ವಿಷಯಗಳನ್ನು ಪರಿಶೀಲಿಸಬೇಕು. ಒಂದು ವೇಳೆ ಇಂತಹ ಘಟನೆಗಳನ್ನು ಎದುರಿಸಿದರೆ, ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ.

Exit mobile version