ಪೋಷಕರ ನಡುವಿನ ನಿರಂತರ ಜಗಳ, ಪ್ರೀತಿಯ ಕೊರತೆ ಮತ್ತು ವಿದ್ಯಾಭ್ಯಾಸದಲ್ಲಿ ಉಂಟಾದ ಹಿನ್ನಡೆಯಿಂದ ಮನನೊಂದ 17 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನಗರದ ಹೊಸಕೆರೆಹಳ್ಳಿ ಸಮೀಪದ ಮಂಜುನಾಥ ನಗರದಲ್ಲಿ ವಾಸವಿದ್ದ ಲೇಖನಾ (17) ಎಂಬ ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರಾದ ಈ ಕುಟುಂಬ, ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ತಂದೆ-ತಾಯಿಯ ನಡುವೆ ಇದ್ದ ಅಸಮಾಧಾನ ಇಡೀ ಕುಟುಂಬವನ್ನು ಹೈರಾಣಾಗಿಸಿತ್ತು.
ಪ್ರೀತಿಗಾಗಿ ಹಂಬಲಿಸಿದ್ದ ಬಾಲಕಿ:
ಲೇಖನಾಳ ತಂದೆ-ತಾಯಿ ಕಳೆದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾಯಿ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಾ ಮಗಳನ್ನು ಸಾಕುತ್ತಿದ್ದರು. ಇತ್ತೀಚೆಗಷ್ಟೇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ಲೇಖನಾ, ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಇದರ ಜೊತೆಗೆ ಮನೆಯಲ್ಲಿ ಪೋಷಕರಿಬ್ಬರ ಪ್ರೀತಿ ಸಿಗುತ್ತಿಲ್ಲ ಎಂಬ ಕೊರಗು ಆಕೆಯನ್ನು ಕಾಡುತ್ತಿತ್ತು.
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲೇಖನಾ ಬರೆದಿದ್ದ ಡೆತ್ ನೋಟ್ ಲಭ್ಯವಾಗಿದೆ. ಅದರಲ್ಲಿ ಆಕೆ, “ನನಗೆ ತಂದೆ-ತಾಯಿಯ ಪ್ರೀತಿ ಸಿಗುತ್ತಿಲ್ಲ, ನಾನು ತುಂಬಾ ಒಂಟಿಯಾಗಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ” ಎಂದು ಬರೆದಿದ್ದಾಳೆ. 15 ದಿನಗಳ ಹಿಂದಷ್ಟೇ ಹೊಸ ಮನೆಗೆ ಬಾಡಿಗೆಗೆ ಬಂದಿದ್ದ ಈ ತಾಯಿ-ಮಗಳಿಗೆ ಹೊಸ ಬದುಕು ಕಟ್ಟಿಕೊಳ್ಳುವ ಮೊದಲೇ ಇಂತಹ ವಿಪತ್ತು ಎದುರಾಗಿದೆ.
ಸದ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಳೆಯ ವಯಸ್ಸಿನ ಮಕ್ಕಳ ಮೇಲೆ ಪೋಷಕರ ಕಲಹ ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.





