ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ಮಗನನ್ನು ಉತ್ತೇಜಿಸಲು ತಂದೆಯೊಬ್ಬ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಅಪರೂಪದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಪರೀಕ್ಷೆಯ ಸೋಲು ಜೀವನದ ಕೊನೆಯಲ್ಲ ಎಂದು ತೋರಿಸಿ, ಮಗನಿಗೆ ಧೈರ್ಯ ತುಂಬಿದ ಕುಟುಂಬದ ಕತೆ ಎಲ್ಲರ ಮನ ಗೆದ್ದಿದೆ.
ಹೌದು ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್‌ನ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿದ್ದ ಅಭಿಷೇಕ್ ಯಲ್ಲಪ್ಪ ಚೊಳಚಗುಡ್ಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 200 ಅಂಕಗಳನ್ನು (32%) ಗಳಿಸಿ, ಆರು ವಿಷಯಗಳಲ್ಲಿ ಫೇಲಾಗಿದ್ದಾನೆ. ಈ ಫಲಿತಾಂಶದಿಂದ ಬೇಸರಗೊಂಡಿದ್ದ ಅಭಿಷೇಕ್‌ನನ್ನು ಉತ್ತೇಜಿಸಲು ತಂದೆ, ತಾಯಿ, ಸಹೋದರ, ಸಹೋದರಿ, ಅಜ್ಜಿ, ಮತ್ತು ಕುಟುಂಬದವರು ಒಟ್ಟಾಗಿ ಸರ್ಪ್ರೈಸ್‌ನಲ್ಲಿ ಕೇಕ್ ತಂದು ಸಿಹಿತಿನ್ನಿಸಿ ಸಂಭ್ರಮಿಸಿದ್ದಾರೆ.
ಅಭಿಷೇಕ್‌ನ ಹಿನ್ನೆಲೆ
ಅಭಿಷೇಕ್ 15 ತಿಂಗಳ ಮಗುವಾಗಿದ್ದಾಗ ಎರಡೂ ಪಾದಗಳು ಸುಟ್ಟು, ನೆನಪಿನ ಶಕ್ತಿಯನ್ನು ಭಾಗಶಃ ಕಳೆದುಕೊಂಡಿದ್ದಾನೆ. ಈ ದೈಹಿಕ ಮತ್ತು ಮಾನಸಿಕ ಸವಾಲಿನಿಂದಾಗಿ ಉತ್ತರಗಳನ್ನು ನೆನಪಿಟ್ಟುಕೊಂಡು ಬರೆಯಲು ವಿಫಲನಾಗಿದ್ದಾನೆ. ಫಲಿತಾಂಶದಿಂದ ಬೇಜಾರಾಗಿದ್ದ ಅವನಿಗೆ ಕುಟುಂಬದ ಬೆಂಬಲವು ಹೊಸ ಉತ್ಸಾಹ ತಂದಿದೆ. ಅಭಿಷೇಕ್‌ನ ತಂದೆಯವರ ಈ ಸಕಾರಾತ್ಮಕ ದೃಷ್ಟಿಕೋನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಫೇಲ್ ಆಗಿದ್ದರಿಂದ ಬೇಜಾರಾಯಿತು, ಆದರೆ ನಮ್ಮ ತಂದೆ-ತಾಯಿ ಎಲ್ಲರೂ ಧೈರ್ಯ ತುಂಬಿದರು. ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ,” ಎಂದು ಅಭಿಷೇಕ್ ಹೇಳಿದ್ದಾನೆ.