ಬೆಂಗಳೂರು ಸರ್ಜಾಪುರದ ಬೂರಗುಂಟೆಯಲ್ಲಿರುವ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಆವರಣದಲ್ಲಿ ಮಂಗಳವಾರ ರಾತ್ರಿ ಭಾರೀ ಉದ್ವಿಗ್ನತೆ ಉಂಟಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಯೂನಿವರ್ಸಿಟಿಯ ನಾಮಫಲಕಕ್ಕೆ ಮಸಿ ಬಳಿದು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯೂನಿವರ್ಸಿಟಿಯಲ್ಲಿ ಭಾರತೀಯ ಸೈನ್ಯಕ್ಕೆ ಅಪಮಾನ ಮಾಡುವ ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ರೀತಿಯ ‘ದೇಶ ವಿರೋಧಿ’ ಕಾರ್ಯಕ್ರಮ ನಡೆಯುತ್ತಿದೆ ಎಂಬ ಆರೋಪ.
ABVP ಸದಸ್ಯರು ಆರೋಪಿಸಿದಂತೆ, SPARK ಎಂಬ ವಿದ್ಯಾರ್ಥಿ ಸಂಘಟನೆಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕುನನ್-ಪೋಶ್‌ಪೋರಾ ಘಟನೆಯನ್ನು ಉಲ್ಲೇಖಿಸಿ ಭಾರತೀಯ ಸೈನ್ಯವನ್ನು ‘ರೇಪಿಸ್ಟ್’ಗಳಂತೆ ಚಿತ್ರಿಸಲಾಗಿದೆ ಎಂದು ಹೇಳಲಾಗಿದೆ. ಇದು ಜಮ್ಮು-ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಪ್ರಯತ್ನ ಎಂದು ABVP ಆರೋಪಿಸಿದೆ. ಈ ಕಾರ್ಯಕ್ರಮವನ್ನು ತಡೆಯಲು ABVP ಕಾರ್ಯಕರ್ತರು ಯೂನಿವರ್ಸಿಟಿ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು. ನಾಮಫಲಕಕ್ಕೆ ಮಸಿ ಬಳಿದು, “Ban SPARK” ಎಂದು ಬರೆದು, ತ್ರಿವರ್ಣ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದರು.
ಯೂನಿವರ್ಸಿಟಿ ಆಡಳಿತ ಮಂಡಳಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ಅಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಹೊರಗಿನ ಸುಮಾರು 20 ಮಂದಿ ಬಲವಂತವಾಗಿ ಆವರಣಕ್ಕೆ ನುಗ್ಗಿ ಆಸ್ತಿ ಹಾನಿ ಮಾಡಿದ್ದಾರೆ, ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಯೂನಿವರ್ಸಿಟಿ ಆರೋಪಿಸಿದೆ.
ಸರ್ಜಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಮಧ್ಯರಾತ್ರಿ ಸುಮಾರು 21 ಮಂದಿ ABVP ಕಾರ್ಯಕರ್ತರನ್ನು ಬಂಧಿಸಿ ಆನೇಕಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ರಾತ್ರಿಯೇ ಜಾಮೀನು ಮಂಜೂರು ಮಾಡಿದ್ದು, ಮುಂಜಾನೆ 3.30ರ ಸುಮಾರಿಗೆ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.
ABVP ಮುಖಂಡ ಮಣಿಕಂಠ ಅವರು ಈ ಸಂದರ್ಭದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇಶ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಯೂನಿವರ್ಸಿಟಿಯ ಮಾನ್ಯತೆ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಪೊಲೀಸರು ಈ ಘಟನೆಯ ಬಗ್ಗೆ ಪೂರ್ವಭಾವಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಘಟನೆಯಿಂದ ಕ್ಯಾಂಪಸ್‌ನಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭದ್ರತೆಗಾಗಿ ಎಚ್ಚರಿಕೆ ವಹಿಸುತ್ತಿದ್ದಾರೆ.




