ಈ ಮೊದಲು ‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದ ಹೆಸರು ‘ಅಪರಿಚಿತೆ’. ಹೌದು ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ ‘ಅಪರಿಚಿತ’ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ, ‘ಸಿನಿಮಾ ಪವರ್ ಫುಲ್ ಮೀಡಿಯಾ. ಸಾಮಾಜಿಕ ಸಂದೇಶ ಇರುವ ಇಂತ ಸಿನಿಮಾ ಹೆಚ್ಚಾಗಿ ಬರಬೇಕು, ಆಗ ಜನ ಹಾಗೂ ಇಂಡಸ್ಟ್ರಿ ಚನ್ನಾಗಿ ಇರುತ್ತದೆ’ ಎಂದು ಶುಭ ಹಾರೈಸಿದರು.
ನಂತರ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಗೀತಪ್ರಿಯ ಮಾತನಾಡಿ, ‘ನನಗೆ ಸಾಮಾಜಿಕ ಸಂದೇಶ ಇರುವಂತಹ ಸಿನಿಮಾಗಳಲ್ಲಿ ನಟಿಸಲು ತುಂಬಾ ಇಷ್ಟ. ಇದೂ ಕೂಡಾ ಸಾಮಾಜಿಕ ಸಂದೇಶ ಇರುವಂತ ಸಿನಿಮಾ. ಹಾಗಾಗಿ ನಾನು ನಟನೆ ಮಾಡುತ್ತಿದ್ದೇನೆ. ನಾಳೆಯಿಂದ ಚಿತ್ರೀಕರಣ ಶುರುವಾಗುತ್ತಿದೆ. ಕರ್ನಾಟಕದಲ್ಲಿಯೇ ಚಿತ್ರೀಕರಣ ನಡೆಯಲಿದೆ. “ಅಪರಿಚಿತ” ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ನಾನು ಶಿಕ್ಷಕಿ ಪಾತ್ರ ಮಾಡುತ್ತಿದ್ದೇನೆ ಎಂದು ಹೇಳಿದರು.
ಈ ಚಿತ್ರವನ್ನು ವಿಶ್ವನಾಥ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈಗಾಗಲೇ ‘ಹನುಮಂತಪ್ಪನ ಎರಡು ಎಕರೆ ಜಾಗ’ ಸಿನಿಮಾ ನಿರ್ದೇಶನ ಮಾಡಿದ್ದು ಬಿಡುಗಡೆಗೆ ಸಿದ್ದವಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರು, ‘ಇದು ನೈಜ ಕಥೆ ಆಧಾರಿತ ಸಿನಿಮಾ. ಸಿಂಧೂ ಲೋಕನಾಥ್, ಆರ್.ಜೆ. ನಿಖಿತಾ, ಹಿರಿಯ ನಟ ಶ್ರೀನಾಥ್ ಹಾಗೂ ಶ್ರೀನಾಥ್ ಅವರ ಮಗ ರೋಹಿತ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದ್ದು ಥ್ರಿಲ್ಲರ್ ಚಿತ್ರ ಆಗಿರುತ್ತದೆ. ನಾಳೆಯಿಂದ ಚಿತ್ರೀಕರಣ ಶುರು ಮಾಡಿ ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು.
‘ನನ್ನ ಹೆಂಡತಿ ಸೋಶಿಯಲ್ ಮೆಸೇಜ್ ಇರುವಂತ ಸಿನಿಮಾಗಳನ್ನು ಮಾಡುತ್ತಿರುವುದು ಖುಷಿ ಇದೆ. ಅವರ ಮೊದಲ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು. ಹಾಗಾಗಿ ನಾವೇ ಈ ಚಿತ್ರವನ್ನು ಅಮರ ಫಿಲಂಸ್ ಬ್ಯಾನರ್ ಮೂಲಕ ನಿರ್ಮಾಣ ಮಾಡುತ್ತಿದ್ದೇವೆ’ ಎಂದರು ನಟಿ ಗೀತಪ್ರಿಯ ಅವರ ಪತಿ ಸುರೇಶ್ ಕುಮಾರ್.
ಹಿರಿಯ ನಟ ಶ್ರೀನಾಥ್ ಮಾತನಾಡಿ, ‘ಕೊರೋನಾ ನಂತರ ನಾನು ನಟಿಸುತ್ತಿರುವ ಮೊದಲ ಸಿನಿಮಾ ಇದು. ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡಲು ಈ ಸಿನಿಮಾ ಮಾಡುತ್ತಿರುವುದು ಖುಷಿ ಆಯ್ತು. ಅದರಲ್ಲೂ ಮುಖ್ಯವಾಗಿ 40 ವರ್ಷದ ನಂತರ ನಾನು , ನನ್ನ ಮಗ ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ಹೆಚ್ಚಿನ ಖುಷಿ ಆಗುತ್ತಿದೆ’ ಎಂದರು.
ನಟ ಶ್ರೀನಾಥ್ ಅವರ ಮಗ ರೋಹಿತ ಮಾತನಾಡಿ, ‘ನಾನು 35 ವರ್ಷ ಆದಮೇಲೆ ಸಿನಿಮಾದಲ್ಲಿ ನಟನೆ ಮಾಡ್ತಿದ್ದೇನೆ. ಅದರಲ್ಲೂ ಅಪ್ಪನ ಜೊತೆ ನಟಿಸೋದು ಖುಷಿ ಇದೆ. ಪಾತ್ರ ಕೂಡ ತುಂಬಾ ಚನ್ನಾಗಿದೆ’ ಎಂದು ಹೇಳಿದರು. ವೇದಿಕೆಯಲ್ಲಿ ಮತ್ತೋರ್ವ ನಟಿ ಆರ್.ಜೆ. ನಿಖಿತಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.